ಸ್ಟೇಟಸ್ ಕತೆಗಳು (ಭಾಗ ೧೧೦೦)- ಜೀವನ

ಸ್ಟೇಟಸ್ ಕತೆಗಳು (ಭಾಗ ೧೧೦೦)- ಜೀವನ

ಅಲ್ಲಿ ಕುಳಿತವರು ಮೂವರು. ಅವರ ಜೀವನದ ಎಲ್ಲಾ ಘಟನೆಗಳು ಒಂದೇ ಕಾಲಘಟ್ಟದಲ್ಲಿ ನಡೆದಿರುವಂಥದ್ದು ಓದುವಿಕೆ, ಸುತ್ತಮುತ್ತಲಿನ ಸಮಾಜ, ಶಿಕ್ಷಣ, ಒಳಿತು ಕೆಡುಕು ಎಲ್ಲವೂ ಏಕಸ್ವಾಮ್ಯವಾಗಿತ್ತು. ಯಾರಿಗೂ ಹೆಚ್ಚೆನೂ ವಿಶೇಷವಾದ ಮನ್ನಣೆಗಳು ಸಿಗಲಿಲ್ಲ. ಕೈತುಂಬಾ ಸಂಪಾದನೆ ಆಗಲಿಲ್ಲ. ಎಲ್ಲವೂ ಒಂದೇ ಆಗಿದ್ದರೂ ಸಹ ಮೂವರ ಚಿಂತನಾ ಶೈಲಿಗಳು ಮೂರು ವಿಭಿನ್ನಧಾರಿಗಳನ್ನು ತೋರಿಸ್ತಾ ಇದ್ದವು. ವರ್ಷಗಳು ಒಂದಷ್ಟು ದಾಟಿದ ಮೇಲೆ ತಲೆಯ ಮೇಲಿನ ಕೂದಲುಗಳೆಲ್ಲ ಜಾರಿ ನೆಲಕ್ಕಿಳಿದ ನಂತರ ಅವರಿಗೆ ಜೀವನ ಅದ್ಭುತವಾಗಿ ಅರ್ಥವಾಗಿ ಹೋಗಿತ್ತು. ಅವರು ತಮ್ಮ ಮಕ್ಕಳಿಗೆ ಅದನ್ನೇ ಪಾಠವಾಗಿ ಹೇಳುತ್ತಿದ್ದರು. ಮೊದಲನೇಯವನ ಪಾಠ, ಇಷ್ಟು ಜೀವನ. ಹೊಸತೇನನ್ನು ಬಯಸಬೇಡ .ಸಂತೋಷವೆನ್ನುವುದು ಬಂದು ಹೋಗುತ್ತಾನೆ ಇರುತ್ತೆ . ಏನೂ ಹೊಸತು ಸಾಧ್ಯವಾಗೋದಿಲ್ಲ. ಅದಕ್ಕೆ ಇಷ್ಟು ಜೀವನ .

ಆದರೆ ಎರಡನೇಯವನ ಸಿದ್ದಾಂತ ಇದಲ್ಲ, ಇಷ್ಟೇ ಜೀವನ. ಅದೇನೇ ಹೊಸತನದ ಯೋಚನೆಯೊಳಗಿಳಿದರೂ ಸಹ ಅದು ಯಾವ್ದು ಕೈಗೂಡುವಂತದ್ದಲ್ಲ. ನಿನ್ನಿಂದ ಅದ್ಭುತವಾದದ್ದು ಏನೂ ಸಾಧನೆ ಆಗುವುದಿಲ್ಲ. ನಿನ್ನ ಬದುಕಿನ ಎಲ್ಲ ಹೆಜ್ಜೆಗಳು ಆಗಾಗ ಮುಗಿದು ಮತ್ತೆ ಮುಂದುವರಿಯಬೇಕಾದ ಅನಿವಾರ್ಯತೆಗೆ ಬಂದು ತಲುಪುತ್ತದೆ. ಹೊಸ ಮನೋಭಿಲಾಷೆ ಇಲ್ಲದೆ ಹಾಗೆಯೇ ಬದುಕಿ ಬಿಡು ಇಷ್ಟೇ ಜೀವನ.

ಆದರೆ ಮೂರನೆಯವರದು ಸ್ಪೂರ್ತಿ ತುಂಬುವ ಮಾತುಗಳು, ಇಷ್ಟ ಜೀವನ. ನಾನಂದುಕೊಂಡಿರುವುದಕ್ಕಿಂತ ಹೆಚ್ಚಿನದನ್ನ ನೀಡಿದೆ. ಹಂಚುವುದಕ್ಕೆ ಬಳಸಿಕೊಳ್ಳುವುದಕ್ಕೆ ಎಲ್ಲದಕ್ಕೂ ಅವಕಾಶ ನೀಡಿದೆ. ಪ್ರತಿಕ್ಷಣ ಈ ಬದುಕನ್ನು ಇಷ್ಟಪಡುವಂತೆ ಮಾಡಿ ಅದ್ಭುತ ದಾರಿಯೆಡೆಗೆ ಸಾಗುವಂತೆ ಮಾಡಿದೆ ಹಾಗಾಗಿ ನನಗಿಷ್ಟ ಜೀವನ… ಒಂದೇ ಬೇರಿನ ಗಿಡದ್ದಲ್ಲಿ ಬೇರೆ ಬೇರೆ ಹಣ್ಣುಗಳು ಬಿಟ್ಟಿವೆ

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ