ಸ್ಟೇಟಸ್ ಕತೆಗಳು (ಭಾಗ ೧೧೦೧)- ಹೇಗೆ ಹೇಳಲಿ?
ಉತ್ತರ ಹೇಗೆ ನೀಡಲಿ? ಆ ಮನೆಯವರು ತುಂಬಾ ಕನಸು ಕಟ್ಟಿಕೊಂಡವರು, ಬದುಕನ್ನ ಅವನಿಗಾಗಿ ಸವೆಸಿದವರು, ಅವನೇ ಬದುಕು ಅಂದುಕೊಂಡವರು. ಆತನಿಷ್ಟದಂತೆ ಶಾಲೆ, ಕಾಲೇಜಿಗೆ ಕಳುಹಿಸಿದವರು, ಎಲ್ಲಾ ಆಟ ಪಾಠಗಳಲ್ಲಿ ತಪ್ಪುಗಳನ್ನು ತಿದ್ದಿ ಹೇಳಿ ದೊಡ್ಡ ಕನಸಿಗೆ ನೀರೆರೆದವರು, ಬೆಳಗ್ಗೆ ಆತನಿಗಿಂತ ಮುಂಚೆ ಎದ್ದು ಆತನ ಇಷ್ಟವೆಲ್ಲವನ್ನ ತಯಾರು ಮಾಡಿ ಆತನ ಹೊಟ್ಟೆ ತುಂಬಿಸಿ ಕಾಲೇಜಿಗೆ ಕಳುಹಿಸುವವರು, ರಾತ್ರಿ ಆತನ ಓದು ಮುಗಿಯುವರೆಗೂ ಪಕ್ಕದಲ್ಲಿದ್ದು ಆತನಿಗೆ ಧೈರ್ಯ ತುಂಬುವರು, ಹೀಗಿದ್ದವರ ಬಳಿ ಹೋಗಿ ಹೇಗೆ ಹೇಳಲಿ? ನೀವು ಇಂದಿನವರೆಗೂ ಕೈಹಿಡಿದ ಮಗನನ್ನ ಹೆಗಲ ಮೇಲೆ ಹೊತ್ತು ಮಸಣದಲ್ಲಿ ಮಲಗಿಸಬೇಕೆಂದು, ಅವರಿಗೆ ಹೇಗೆ ಹೇಳಲಿ ಸುಮ್ಮನೆ ತನ್ನ ಮನೆಯ ಕಡೆಗೆ ಬರುತ್ತಿರುವಾಗ ಹಿಂದಿನಿಂದ ಬಂದ ದೊಡ್ಡ ಲಾರಿ ಎಂದು ಆತನ ಬೆನ್ನನ್ನ ತಾಕಿದ ಕ್ಷಣದಲ್ಲಿ ಪ್ರಾಣ ಪಕ್ಷಿ ಹಾರಿಹೋಯಿತೆಂದು, ಸಣ್ಣ ಸೂಜಿ ಚುಚ್ಚಿದರೂ ನೋವಾಗುತ್ತದೆ ಅನ್ನುತ್ತಿದ್ದ ಮಗನ ದೇಹ ರಕ್ತದ ಮಡುವಲ್ಲಿ ಬಿದ್ದಿದೆ ಎಂದು, ಮಾತು ಮಾತಿಗೂ ಅಮ್ಮ ಅಪ್ಪ ಎನ್ನುತ್ತಿದ್ದವನು ಕೊನೆಯ ಕ್ಷಣದಲ್ಲಿ ಅಮ್ಮ ಎನ್ನುವ ಮಾತನ್ನ ಮಾತ್ರ ಆಡಿದನೆಂದು ಹೇಗೆ ಹೇಳಲಿ...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ