ಸ್ಟೇಟಸ್ ಕತೆಗಳು (ಭಾಗ ೧೧೦೭)- ಜಾತ್ರೆ
ಕಣ್ಣಿನ ಆಸೆಗಳನ್ನು, ಕಿಸೆ ಕೇಳುವುದಿಲ್ಲಾ, ಹಾಗೆ ಜಾತ್ರೆಯಲ್ಲಿ ಓಡಾಡ್ತಾ ಒಂದೊಂದು ಕಣ್ಣುಗಳು ಒಂದೊಂದು ತೆರನಾದ ಕಥೆಯನ್ನ ಹೇಳ್ತಾಯಿತ್ತು. ಕೆಲವರಿಗೆ ಕಿಸೆ ತುಂಬಿದ್ದರೂ ಕಣ್ಣಲ್ಲಿ ಆಸೆಗಳಿಲ್ಲ. ಯಾವುದನ್ನು ತೆಗೆದುಕೊಳ್ಳಬೇಕು ಅನ್ನುವ ಆಸಕ್ತಿಯೂ ಇಲ್ಲ. ಮುಂದುವರಿಯುವ ಹೆಜ್ಜೆಗಳು ತುಂಬಾ ಇದ್ದಾವೆ. ಕೆಲವರ ಕಣ್ಣಲ್ಲಿ ಕಣ್ಣೀರಿಳಿಯುತ್ತಿದೆ, ತನ್ನ ಜೊತೆಗೆ ಬಂದ ಸಹವರ್ತಿಗೆ ಅವರಿಗೆ ಇಷ್ಟವಾದದ್ದನ್ನ ಏನೂ ನೀಡಲಾಗಲಿಲ್ಲ ಅನ್ನುವ ಬೇಸರ. ಬದುಕು ಹಾಗೆ ಅಲ್ವಾ ಎಲ್ಲರಿಗೂ ಆಸೆಗಳು ಇರುತ್ತವೆ. ಇನ್ನು ಕೆಲವರಿದ್ದಾರೆ ಕಿಸೆಯ ಒಳಗೆ ತುಂಬಿಕೊಂಡ ನೋಟಿಗೆ ಒಪ್ಪಿತವಾಗುವ ಸಣ್ಣ ಸಣ್ಣ ಆಸೆಗಳನ್ನು ಅದ್ಭುತವಾಗಿ ಅನುಭವಿಸಿಕೊಂಡು ಬದುಕುತ್ತಾರೆ. ಎಲ್ಲವೂ ಅವರದೇ ಬದುಕು. ಮಾರಾಟಕ್ಕೆ ಬಂದವನು ಖಾಲಿಯಾಗುವ ತನಕ ಕಾಯುತ್ತಾನೆ, ನಡೆದಾಡುತ್ತಿರುವವನು ಕಿಸೆ ಖಾಲಿಯಾಗುವ ತನಕ ನಡೀತಾನೆ. ಎಲ್ಲರೂ ಖಾಲಿಯಾಗಿಸಿ ತುಂಬಿಸಿಕೊಳ್ಳುವ ತವಕದಲ್ಲಿ ಆ ಪ್ರದೇಶದಲ್ಲಿ ಬದುಕ್ತಾ ಇದ್ದಾರೆ... ಬದುಕು ನೋಡುವಿಕೆಯಲ್ಲೂ ಕಲಿಸುತ್ತದೆ... ತಿಳಿಯಿತಾ..ಅಪ್ಪ ತನ್ನ ಮಗನಿಗೆ ಬದುಕನ್ನ ಪರಿಚಯಿಸ್ತಾ ಇದ್ದರು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ