ಸ್ಟೇಟಸ್ ಕತೆಗಳು (ಭಾಗ ೧೧೦) - ವಿಪರ್ಯಾಸ

ಸ್ಟೇಟಸ್ ಕತೆಗಳು (ಭಾಗ ೧೧೦) - ವಿಪರ್ಯಾಸ

ರವಿಯಾಗಸದಿ ಮೂಡೋಕೆ ಇನ್ನೂ ಸಮಯವಿತ್ತು. ಆಗಲೇ ಮನೆಯಿಂದ ಹೊರಬಿದ್ದಿದ್ದ ಆತ. ಚಂದಿರನೇ ಅಸ್ಪಷ್ಟ ದಾರಿ ತೋರಿಸುತ್ತಿದ್ದ. ಗದ್ದೆಯ ಬದುವಿನಲ್ಲಿ ಸಾಗಿ ನೀರು ಬಿಟ್ಟ. ಗದ್ದೆ ಉತ್ತಾಯಿತು, ಬಿತ್ತಾಯಿತು. ಮನೆಯ ಮಗನಂತೆ ಲಾಲಿಸಿ, ಕಳೆಗಳನ್ನು ಕಿತ್ತು, ಗೊಬ್ಬರ ಹಾಕಿದ. ಇವನ ನೂರ್ಮಡಿ ಪ್ರೀತಿಗೆ ಪೈರುಗಳು ಮೇಲೆದ್ದು ನಿಂತವು. ಗಾಳಿಯೊಂದಿಗೆ ತಂಪಿನಿಂದ ತೂಗುತ್ತಿತ್ತು. ಪೈರುಗಳಿಂದ ಫಸಲು ರೈತನ ಮೊಗವ ನೋಡಲು ಉತ್ಸುಕತೆಯಿಂದ ಆಗಮಿಸಿದವು. ಕಟಾವಿನ ದಿನ ನಿಗದಿಯಾಯಿತು, ಗದ್ದೆಯಲ್ಲಿ ಭತ್ತ ರಾಶಿ ಬಿತ್ತು. ಸಾಧನೆಗಳ ತುದಿಗೇರಿದರೂ ಮುಂದಿನ ಕ್ಷಣವನ್ನು ಅರಿಯದವರು ನಾವು. ಹಾಗೆಯೇ ಆ ದಿನ ನೀಲಾಕಾಶ ಕ್ಷಣದಲ್ಲಿ ಕಪ್ಪಡರಿ ಮಳೆಯನ್ನು ಸುರಿಸಿತು. ಇದೇನು ಮಳೆ ಸುರಿಸುವ ಕಾಲವಲ್ಲ . ಮನೆಯಿಂದ ಗದ್ದೆಗೆ ಕಾಲಿಡುವ ಮೊದಲೇ ನೀರಿಗೆ ಫಸಲು ನೆನೆದಿತ್ತು. ಹರಿಯುವ ಜಾಗದಲ್ಲಿ ಹರಿದಾಗಿತ್ತು. ಅವನ ಕಣ್ಣೀರಿನೊಂದಿಗೆ ಮಳೆಯು ಸೇರಿಹೋಯಿತು. ಅಯ್ಯೋ ಎನ್ನುತ್ತಾ ಸಿಕ್ಕವುಗಳನ್ನು ಬಳಸಿ ಒಂದೆಡೆ ಉಳಿಸುವ ಪ್ರಯತ್ನವಾದರೂ ವ್ಯರ್ಥ ಅನ್ನಿಸಿತು. ಗದ್ದೆಯ ಬದುವಿಗೊರಗಿ ಯೋಚಿಸಿದ. ಇಂದಿನ ಸ್ಥಿತಿಗೆ  ದೂರುವುದಾದರೂ  ಯಾರನ್ನು? ದೇವರನ್ನೋ? ಮನುಷ್ಯರನ್ನೋ? ಊರಲ್ಲೊಂದು ದಾಸ್ತಾನು ಶೇಖರಣೆಗೆ ಜಾಗವಿಲ್ಲ, ಭತ್ತ ಬಿಡಿ ಯಾವುದೇ ಬೆಳೆಗೆ ನಿಗದಿಯಾದ ದರವಿಲ್ಲ. ಇಂದು ಖರೀದಿಸುವವರು ಇಲ್ಲವೆಂದು ನಾಳೆಗೆ ತೆಗೆದಿಡುವ ವ್ಯವಸ್ಥೆಯೂ ಇಲ್ಲ. ರೈತ ಅನ್ನೋದು ಅದೊಂದು ಪ್ರತಿಷ್ಠೆಯ ಕೆಲಸ ಆಗುವುದು ಯಾವಾಗ? ಇವನ ಯೋಚನಾಲಹರಿ ಹರಿದಿತ್ತು, ಅತ್ತಕಡೆ ನೀರಿನೊಂದಿಗೆ ಭತ್ತವೂ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ