ಸ್ಟೇಟಸ್ ಕತೆಗಳು (ಭಾಗ ೧೧೧೦)- ಪ್ರಶ್ನೋತ್ತರ
ಬದುಕು ಹೀಗೆ ಉಳಿದು ಬಿಟ್ರೆ ಅನ್ನುವ ಭಯ ಕಾಡುತ್ತಿದೆ. ಪ್ರತಿ ದಿನದ ಸಂಜೆ ಆ ದಿನದ ಒಟ್ಟು ಪಡೆಯುವಿಕೆಯನ್ನು ಯೋಚಿಸಿದರೆ ಏನೂ ಇಲ್ಲ ಅನ್ನೋದು ಮತ್ತೆ ಮತ್ತೆ ಕಾಡುತ್ತಿದೆ. ದಿನಂಪ್ರತಿಯಂತೆ ಈ ದಿನವೂ ಮುಗಿದು ಹೋಗಿಬಿಟ್ಟರೆ ಆ ದಿನದ ಸೂರ್ಯ ಕೆಳಗೆ ಜಾರಿಬಿಟ್ಟರೆ ಮುಂದಿನ ಬದುಕಿನಲ್ಲಿ ಎದುರಾಗುವ ವ್ಯಕ್ತಿಗಳಿಗೆ ಭಾವಗಳಿಗೆ ಜೀವಗಳಿಗೆ ಏನೆಂದು ಉತ್ತರ ಕೊಡುವುದು? ಎಲ್ಲಾ ಕಡೆಯೂ ಯೋಚನೆ ಪ್ರಶ್ನೆ ಇವುಗಳೇ ಬದುಕಾಗಿಬಿಟ್ಟಿದೆ ಅಂತ ಅನ್ನಿಸ್ತಾ ಇದೆ. ಹಾಗೆ ನಿರಾಕಾರನ ಮುಂದೆ ಕೈಮುಗಿದು ನಿಂತಾಗ ಆತನಿಂದ ಆಶರೀರವಾಣಿಯೊಂದು ಕಿವಿಗೆ ತಲುಪಿ ಎದೆಯೊಳಗೆ ಸ್ಥಿರವಾಯಿತು.
"ನೀನು ಯಾವುದನ್ನು ನಿರ್ಧಾರವೇ ತೆಗೆದುಕೊಂಡಿಲ್ಲ. ನಿರ್ಧರಿಸಿಲ್ಲ. ಹೊಸ ಹೆಜ್ಜೆಯನ್ನು ಇಟ್ಟಿಲ್ಲ, ವಿಭಿನ್ನ ಆಲೋಚನೆ ಮಾಡಿಲ್ಲ, ಧೈರ್ಯ ತಂದುಕೊಂಡಿಲ್ಲ. ಹೀಗಾದಾಗ ಬದುಕು ಬದಲಾಗುವುದು ಹೇಗೆ? ನಾನು ನಿನ್ನ ಜೊತೆ ನಿಲ್ಲುವುದು ಹೇಗೆ? ನೀನು ನಿರ್ಧರಿಸಿ ಒಂದು ಹೆಜ್ಜೆ ಇಟ್ಟರೆ ಮುಂದೆ ನೂರು ಹೆಜ್ಜೆಗಳ ದಾರಿಯನ್ನ ನಾನು ನಿನಗೆ ತೋರಿಸ್ತೀನಿ. ಸಾಗಬೇಕಾಗಿರೋದು ನೀನು,ದೆ ಸಾಗುತ್ತಾ ಹೋದಹಾಗೆ ಮುಂದೆ ಬೀಳುತ್ತಿಯಾ ಆಗ ಕೈಕೊಟ್ಟು ನಿಲ್ಲಿಸುತ್ತೇನೆ. ಕುಸಿದು ಕಣ್ಣೀರಿಟ್ಟಾಗ ಕಣ್ಣೀರು ಒರೆಸಿ ಜೊತೆಗೆ ನಿಲ್ತೇನೆ ,ಆದರೆ ಒಂದು ಹೆಜ್ಜೆಯ ನಿರ್ಧಾರ ನಿನ್ಗದು ನೆನಪಿಟ್ಟುಕೋ, ನೀನು ತೆಗೆದುಕೊಳ್ಳುವ ನಿರ್ಧಾರವೇ ನಿನ್ನ ಬದುಕಾಗಿರುತ್ತೆ ....ಮೌನವಾಯಿತು.. ಮನಸ್ಸೊಳಗಿಂದ ಕಣ್ತೆರೆಯಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ