ಸ್ಟೇಟಸ್ ಕತೆಗಳು (ಭಾಗ ೧೧೧೩)- ಅಡುಗೆ ಮನೆ

ಸ್ಟೇಟಸ್ ಕತೆಗಳು (ಭಾಗ ೧೧೧೩)- ಅಡುಗೆ ಮನೆ

ಅಮ್ಮನ ಪಾಠಗಳು ನನಗೆ ಯಾವತ್ತು ನೇರವಾಗಿ ಅರ್ಥವಾಗುತ್ತಾ ಇರಲಿಲ್ಲ. ಅವರ ಅಡುಗೆ ಮನೆಯ ಒಂದಷ್ಟು ಚಟುವಟಿಕೆಗಳು ನನಗೆ ಬದುಕಿನ ಎಲ್ಲ ಪಾಠವನ್ನು ತುಂಬಾ ಸರಳವಾಗಿ ವಿವರಿಸಿ ಕೊಡುತ್ತಿದ್ದರು ಮನೆಯಲ್ಲಿ ಮೀನು ಸಾರು ತಯಾರಾಗಬೇಕಿತ್ತು. ಅಮ್ಮ ಇನ್ಯಾವುದೋ ಕೆಲಸ ಮಾಡ್ತಾ ಇದ್ದ ಕಾರಣ ನನಗೆ ಸರಿಯಾದ ಮಾರ್ಗದರ್ಶನ ಮಾಡ್ತಾ ಇದ್ಲು. 10 ಮೆಣಸು, ಅರ್ಧ ತೆಂಗಿನಕಾಯಿ, ಒಂದು ಚಮಚ ಜೀರಿಗೆ, ಎರಡು ಚಮಚ ಕೊತ್ತಂಬರಿ ,ಹೀಗೆ ಪಟ್ಟಿಗಳು ಕ್ರಮ ಪ್ರಕಾರವಾಗಿ ಕೇಳುತ್ತಾ ಬಂದವು, ನಾನು ಅವುಗಳನ್ನು ಹಾಗೆ ಅನುಸರಿಸ್ತಾ ಬಂದೆ. ಆದರೆ  ನನ್ನ ತಲೆಯಲ್ಲಿ ಸಣ್ಣ ಆಲೋಚನೆಯೊಂದು ಮೊಳಕೆಯೊಡೆದು, ಮೆಣಸನ್ನ 12 ಮಾಡಿದರೆ, ಸ್ವಲ್ಪ ಜೀರಿಗೆ ಕೊತ್ತಂಬರಿ ಹಾಕಿದರೆ ಏನಾಗುತ್ತೆ? ಹಾಗೆ ಅಮ್ಮನಿಗೆ ತಿಳಿಯದೆ ಎಲ್ಲವನ್ನು ಸ್ವಲ್ಪ ಹೆಚ್ಚೇ ಹಾಕಿಬಿಟ್ಟೆ. ಪದಾರ್ಥ ತಯಾರಾದ ಮೇಲೆ ಗೊತ್ತಾಯ್ತು ಅದು ತಿನ್ನುವ ರುಚಿಗೆ ತಲುಪಿರ್ಲಿಲ್ಲ, ಕಹಿಯಾಗಿತ್ತು. ಅಷ್ಟು ಪದಾರ್ಥ ಅನ್ನದ ಜೊತೆ ಕಲಿಸಿಕೊಂಡು ತಿನ್ನುವ ರುಚಿ ಆಗಲೇ ಇಲ್ಲ ಅಮ್ಮ ಮತ್ತೆ ಮತ್ತೆ ಕೇಳಿದ್ರು ನಾನು ಹೇಳಿದ್ದಷ್ಟೇ ಹಾಕಿದ್ದೀಯಾ ಅಂತ ನಾನು ತಪ್ಪನ್ನು ಒಪ್ಪಿಕೊಂಡೆ. ಯಾವುದನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕೋ ಆಗ ಮಾತ್ರ ಸರಿಯಾದ ಪದಾರ್ಥ ತಯಾರಾಗುತ್ತದೆ, ಇಲ್ಲವಾದರೆ ಯಾವುದಕ್ಕೂ ಇಲ್ಲದಂತೆ ವ್ಯರ್ಥವಾಗುತ್ತದೆ. ಯಾವುದು ಯಾವ ಪ್ರಮಾಣದಲ್ಲಿ ಎಷ್ಟಿರಬೇಕು ಅಷ್ಟಿದ್ರೆ ಎಲ್ಲವೂ ಚೆಂದ ಇಲ್ಲವಾದರೆ ಎಲ್ಲವೂ ಕಹಿಯಾಗುತ್ತೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ