ಸ್ಟೇಟಸ್ ಕತೆಗಳು (ಭಾಗ ೧೧೧೪)- ತೋಟ

ಸ್ಟೇಟಸ್ ಕತೆಗಳು (ಭಾಗ ೧೧೧೪)- ತೋಟ

ಬೆನ್ನಿನ ಮೇಲೆ ಬಿದ್ದ ಬಾಸುಂಡೆ ಏಟಿಗೆ ಇಡೀ ದೇಹ ಒಂದು ಕ್ಷಣ ಅದುರಿ ಬಿಡ್ತು. ಕಣ್ಣಲ್ಲಿ ಆ ಕ್ಷಣದಲ್ಲಿ ನೀರು ಚಿಟಕ್ಕನೆ ನೆಲಕ್ಕೆ ಇಳಿದು ಏನಾಯಿತು ಎಂದು ತಿರುಗಿ ನೋಡುವಷ್ಟರಲ್ಲಿ ಮತ್ತೆ ಇನ್ನೆರಡು ಬಲವಾದ ಹೊಡೆತ. ಮಾಡಿದ ತಪ್ಪೇನು ಅಂತ ಕೇಳುವುದಕ್ಕಿಂತ ಮೊದಲೇ ಇನ್ನೂ ನಾಲ್ಕು ಹೊಡೆತಗಳು ಬಿದ್ದಾಗಿತ್ತು. ಪ್ರತಿದಿನ ಕೆಲಸ ಮಾಡೋ ತೋಟ ಯಜಮಾನನ ಅಣತಿಯಂತೆ ಹೇಳಿದ ಕೆಲಸವನ್ನ ಚಾಚು ತಪ್ಪದೇ ತುಂಬಾ ಪ್ರೀತಿಯಿಂದ ಮಾಡುತ್ತಿದ್ದವ. ಆಗ ಬಾಳೆಹಣ್ಣಿನ ವ್ಯಾಪಾರ ಜೋರಾಗಿತ್ತು ಬಾಳೆಗೊನೆಗಳನ್ನ ಕಡಿದು ದೊಡ್ಡ ಕೋಣೆಯೊಳಗೆ ಹೋಗಿ ತುಂಬಿಸಬೇಕು. ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ದುಡಿದರೂ ಮಧ್ಯದಲ್ಲಿ ನೀರು ಕುಡಿಯುವುದಕ್ಕೂ ವ್ಯವಧಾನ ಇರಲಿಲ್ಲ. ಬೆಳಗ್ಗೆ ಏನೂ ತಿನ್ನದ ಕಾರಣ ದೇಹ ಹಸಿವಿನಿಂದ ಮತ್ತೆ ಮತ್ತೆ ಕೂಗುತ್ತಾ ಇತ್ತು. ಆ ಹಸಿವನ್ನ ನೀಭಾಯಿಸುವುದಕ್ಕೆ ಬಾಳೆಗೊನೆಯಿಂದ ಕಿತ್ತು ತೆಗೆದ ಎರಡು ಹಣ್ಣಿನಲ್ಲಿ ಒಂದು ಹಣ್ಣನ್ನು ಸಿಪ್ಪೆ ಸುಲಿದು ತಿಂದು ಬಾಯಿಗೆ ಇಟ್ಟಾಗಿತ್ತಷ್ಟೇ. ಅಷ್ಟರಲ್ಲಿ ಆ ಬಲವಾದ ಹೊಡೆತ ದೇಹಕ್ಕೆ ಬಿದ್ದಿತ್ತು ಮತ್ತೆ ಬದುಕುತ್ತೇನೋ ಇಲ್ಲವೋ ಅನ್ನುವ ಕಾರಣಕ್ಕೆ ಆ ಸ್ಥಳವನ್ನು ಬಿಟ್ಟು ಓಡುವುದಕ್ಕೆ ಆರಂಭ ಮಾಡಿದ. ಹಿಂದಿನಿಂದ ವೇಗವಾದ ಹೆಜ್ಜೆಗಳು ಕೇಳುತ್ತಿದ್ದವು. ಆತ ಓಡುತ್ತಲೇ ಇದ್ದ. ಬಾಳೆ ತೋಟದಲ್ಲಿ ತಿಂಗಳಿನಿಂದ ದುಡಿದರು ಒಂದು ತುಂಡು ಬಾಳೆಹಣ್ಣನ್ನು ತಿನ್ನಕ್ಕಾಗದಿರುವ ಪರಿಸ್ಥಿತಿಯ ನೆನೆದು ಕಣ್ಣೀರು ಇಳಿಸುತ್ತಾ ಓಡುತ್ತಲೇ ಇದ್ದಾನೆ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ