ಸ್ಟೇಟಸ್ ಕತೆಗಳು (ಭಾಗ ೧೧೧೮)- ಆಣೆ ಪ್ರಮಾಣ
ಸಮಯ ಸಿಕ್ಕಾಗ ಸುತ್ತಮುತ್ತ ಓಡಾಡೋದು ನನ್ನ ಅಭ್ಯಾಸ. ಹಾಗೆ ಇವತ್ತು ಓಡಾಡ್ತಾ ಪ್ರತಿಸಲವೂ ಜನರನ್ನ ಭೇಟಿ ಆಗ್ತಾ ಇದೆ ಈ ಸಲ ಯಾರು ಸಿಕ್ತಾರೆ ಅಂತ ನೋಡುವಾಗ ಅಲ್ಲಲ್ಲಿ ಆಣೆ ಪ್ರಮಾಣದಲ್ಲಿ ಓಡಾಡ್ತಾ ಇದ್ದವು. ಈ ಆಣೆ ಪ್ರಮಾಣಗಳು ದಾರಿ ಬದಿಯಲ್ಲಿ ಯಾಕೆ ಓಡಾಡ್ತಾ ಇವೆ ಅಂತ ಅವರಲ್ಲಿ ಕೇಳೋಣ ಅಂದುಕೊಂಡು ನೇರವಾಗಿ ಪ್ರಶ್ನೆಗೆ ಇಳಿದೆ .ಅವುಗಳಿಂದ ಅದ್ಬುತವಾದ ಉತ್ತರವು ಸಿಕ್ಕಿತು. ನಿಜವಾಗಿ ನಾವಿರಬೇಕಾದ ಸ್ಥಳ ಇದಲ್ಲ. ವ್ಯಕ್ತಿಯ ಮನಸ್ಸಿನ ಒಳಗೆ ನಂಬಿಕೆಯ ಗೂಡೊಳಗೆ ನಾವು ಗಟ್ಟಿಯಾಗಿರಬೇಕಿತ್ತು. ಆದರೆ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಓಡಾಡುವ ಸ್ಥಿತಿಗೆ ತಲುಪಿಸಿದವರು ನೀವೇ ಸಿಕ್ಕಸಿಕ್ಕ ವಿಚಾರಗಳಿಗೆ ಆಣೆ ಪ್ರಮಾಣಗಳನ್ನ ಹೇಳಿ ಅದನ್ನು ಪೂರ್ತಿ ಮಾಡಲಾಗದೆ ಎಲ್ಲೋ ದಾರಿ ಬದಿಯಲ್ಲಿ ಬಿಟ್ಟು ಹೊರಟು ಬಿಡ್ತೀರಿ. ನಿಮ್ಮ ಜೀವನದ ಬದುಕಿನಲ್ಲಿ ಏನೋ ಬದಲಾವಣೆಗಳಾಗುವುದಿಲ್ಲ ಆದರೆ ನಮ್ಮನ್ನ ಪ್ರಯೋಗಿಸಿದ್ದರಿಂದ ನಾವು ಬೀದಿಗೆ ಬಿದ್ದುಬಿಡುತ್ತವೆ. ನಾವು ಅಂತಲ್ಲ ನಮ್ಮಂತ ಹಲವಾರು ಆಣೆ ಪ್ರಮಾಣಗಳು ಪ್ರತಿ ಊರಿನ ಪ್ರತಿ ಪ್ರದೇಶದಲ್ಲೂ ಓಡಾಡುತ್ತಿವೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡ ನಾಯಕರವರೆಗೂ ಎಲ್ಲರ ಬಾಯಲ್ಲಿ ತಾವು ಅದ್ಭುತ ಅಂತ ರುಜು ಮಾಡಿಸಿಕೊಳ್ಳೋಕೆ ಆಣೆ ಪ್ರಮಾಣಗಳನ್ನ ಎಳೆದು ತರುತ್ತಾರೆ. ನಿಮ್ಮಲ್ಲಿ ಕೇಳಿಕೊಳ್ಳುವುದು ಇಷ್ಟೇ ಅಗತ್ಯಕ್ಕಿದ್ದರೆ ಬಳಸುವಿಕೆಗೊಂದರ್ಥವಿದ್ದರೆ ನಮ್ಮನ್ನು ಬೀದಿಗೆ ತನ್ನಿ, ಅದು ಬಿಟ್ಟು ನಿಮ್ಮ ವ್ಯರ್ಥವಾದ ದುರಲೋಚನೆಗೆ ಬದುಕಿನ ಹೊಸ ಆಲೋಚನೆಗೆ ನಮ್ಮನ್ನ ಬಲಿಪಶು ಮಾಡಬೇಡಿ. ಅಂತಂದು ಅಲ್ಲಿಂದ ಹೊರಟು ಹೋದವು ಆಣೆ ಪ್ರಮಾಣಗಳು...
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ