ಸ್ಟೇಟಸ್ ಕತೆಗಳು (ಭಾಗ ೧೧೧೯)- ಬಾಲ ಸಭೆ

ಸ್ಟೇಟಸ್ ಕತೆಗಳು (ಭಾಗ ೧೧೧೯)- ಬಾಲ ಸಭೆ

ಸಭೆಯಲ್ಲಿ ಎಲ್ಲರೂ ಆಸೀನರಾಗಿದ್ದರು. ಇದು ಅವರ 13ನೇ ಸಭೆ. ಈ ಸಭೆಯು ಆರಂಭವಾಗುವುದಕ್ಕೆ ಅವರಿಗೆ ಪ್ರೇರಣೆ ಸಿಕ್ಕಿದ್ದೇ ತಮ್ಮ ಮನೆಯಲ್ಲಿ ತಮ್ಮ ಸುತ್ತಮುತ್ತ ಆಗುತ್ತಿದ್ದ ಹಲವಾರು ವಿವಿಧ ರೀತಿಯ ಸಭೆಗಳನ್ನು ಕಂಡು. ಇವರು ಸಭೆ ನಡೆಸಬೇಕು ಅಂತ ತೀರ್ಮಾನ ಮಾಡಿದ್ದರು ಹಾಗಾಗಿ ತಮ್ಮದೇ ವಯಸ್ಸಿಗೆ ಅನುಗುಣವಾಗುವ ಒಂದೇ ರೀತಿಯ ಚಿಂತನೆಯುಳ್ಳ ತಮ್ಮ ಬಳಗವನ್ನು ಜೊತೆ ಸೇರಿಸಿಕೊಂಡು ಸಭೆಯನ್ನು ಆರಂಭಿಸಿಯೇ ಬಿಟ್ಟರು. ಅಲ್ಲಿಗೆ ಅಧ್ಯಕ್ಷ ಬೇಕಾಗಿತ್ತು ಉಪಾಧ್ಯಕ್ಷ ಖಜಾಂಚಿ ಕಾರ್ಯದರ್ಶಿ ಹೀಗೆ ಸಭೆಯ ಎಲ್ಲಾ ನಾಮಾವಳಿಗಳು ಒಬ್ಬೊಬ್ಬರಿಗೆ ಗೊತ್ತು ಮಾಡಲ್ಪಟ್ಟವು. ಸಭೆಯಲ್ಲಿ ಎಲ್ಲರಿಗಿಂತ ಹಿರಿಯವರಾದ ಅಕ್ಷರ ಚೆನ್ನಾಗಿರುವ ಒಬ್ಬರಿಗೆ ಸಭೆಯ ನಡಾವಳಿಗಳನ್ನು ಬರೆಯುವುದಕ್ಕೆ ನಿಗದಿ ಮಾಡಲಾಗಿತ್ತು. ಪ್ರತಿ ಸಭೆಯ ಎಲ್ಲ ನಡಾವಳಿಗಳು ಅದರಲ್ಲಿ ದಾಖಲಾದವು. ಅಲ್ಲಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಚರ್ಚೆಯಾಗಲಿಲ್ಲ. ಸಾಲ ಬಡ್ಡಿಗಳ ಸುದ್ದಿಯು ಅಲ್ಲಿಲ್ಲ. ಚರ್ಚೆಯಾಗುತ್ತಿದ್ದದ್ದು ಬರಿಯ ಬದುಕಿನ ದಾರಿಗಳ ಬಗ್ಗೆ. ಅವರೇನು ಕೂದಲು ಹಣ್ಣಾದವರಲ್ಲ, ದೇಹ ಬಾಗಿದವರಲ್ಲ. ಪ್ರತಿಯೊಬ್ಬರೂ ಬದುಕಿಗೆ ಹೆಜ್ಜೆ ಇಡುವ ಪುಟ್ಟ ಮನಸ್ಸಿನ ಪುಟ್ಟ ಹುಡುಗರು. ಶಾಲೆಯ ಅಂಗಳದಲ್ಲಿ ಓಡಾಡಿ ಕೆಲವೇ ದಿನಗಳಷ್ಟೇ ಅವರ ಜೀವನದಲ್ಲಿ ದಾಖಲಾಗಿದ್ದವು. ಪ್ರತಿ ದಿನದ ಸಭೆಯಲ್ಲಿ ತಾವು ಈ ವಾರದವರೆಗೆ ಮಾಡಿದ ತಪ್ಪುಗಳ ಪಟ್ಟಿಗಳನ್ನ ಎಲ್ಲರ ಮುಂದಿಡುತ್ತಿದ್ದರು, ತಪ್ಪಿಗೆ ಕಾರಣವನ್ನು ತಿಳಿಸುತ್ತಿದ್ದರು, ಅದರಿಂದ ಆಗುವ ಅನಾಹುತವನ್ನು ವಿವರಿಸಿದ್ದರು. ಬೇರೆಯವರು ಈ ತಪ್ಪುಗಳನ್ನು ಮಾಡದಂತೆ ಪ್ರೇರೇಪಿಸುತ್ತಿದ್ದರು. ಪ್ರತಿಯೊಬ್ಬರೂ ಅವರ ಜೀವನವನ್ನು ಹಿಂದಿನ ವಾರಕ್ಕಿಂತ ಮುಂದಿನ ವಾರ ಏನು ಬದಲಾಯಿಸಿಕೊಳ್ಳಬಹುದು ಅನ್ನುವ ನಿರ್ಧಾರವನ್ನು ಮಾಡ್ತಾ ಇದ್ರು .ಆ ನಿರ್ಧಾರದಿಂದ ಎಲ್ಲರೊಳಗೂ ಬದಲಾವಣೆಗಳು ಕಂಡುಬಂದವು. ಇದು ಬಾಲ ಸಭೆ. ಇಂದಿನ ಸಭೆಯಲ್ಲಿ ಹೊಸತೊಂದು ತೀರ್ಮಾನವು ಜಾರಿಗೆ ಬಂತು. ಮುಂದಿನ ವಾರದಿಂದ  ನಮ್ಮ ತಂದೆ ತಾಯಿಗಳು ನಮ್ಮ ಖರ್ಚಿಗೆ ನೀಡುವ ಸಣ್ಣ ಮೊತ್ತದಲ್ಲಿ ಒಂದು ಮೊತ್ತವನ್ನ ತೆಗೆದಿಟ್ಟು ಮುಂದಿನ ಸಭೆಯ ಚಹಾ ತಿಂಡಿಗೆ ತರುವುದಾಗಿ ಒಮ್ಮತದ ನಿರ್ಣಯವೂ ಬಂತು. ಒಟ್ಟಿನಲ್ಲಿ ಈ ಸಭೆಯಿಂದ ಅದ್ಭುತವಾದ ಬದಲಾವಣೆ ಮುಂದೆ ಖಂಡಿತವಾಗಿಯೂ ಆಗ್ತದೆ. ದೇಶ ಕಟ್ಟುವ ಎಲ್ಲ ಮನಸ್ಸುಗಳು ಈಗ ತಯಾರಾಗ್ತಾ ಇದ್ದಾರೆ. ಕಾಡು ಹರಟೆಯಲ್ಲಿ ಮೊಬೈಲ್ನೊಳಗೆ ಮುಳುಗಿ ಹೋಗಿರುವ ಈ ಕಾಲದಲ್ಲಿ ಆ ಕೋಣೆಯೊಳಗಿನ ಜಗಲಿಯಲ್ಲಿ ಕುಳಿತ ಪುಟ್ಟ ಮಕ್ಕಳಲ್ಲಿ ಭದ್ರ ಭವಿಷ್ಯದ ಬಗ್ಗೆ ಅದ್ಭುತ ಯೋಜನೆ ಇದೆ. ಆ ಜಗಲಿಯ ಮಕ್ಕಳು ನನ್ನೊಳಗೆ ನಾನಿರಬೇಕಾದ ರೀತಿಯನ್ನ ಅರ್ಥೈಸಿ ಹೋದರು, ಏನೂ ಮಾತನಾಡದೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ