ಸ್ಟೇಟಸ್ ಕತೆಗಳು (ಭಾಗ ೧೧೨೨)- ಸಭೆ

ಸ್ಟೇಟಸ್ ಕತೆಗಳು (ಭಾಗ ೧೧೨೨)- ಸಭೆ

ಇವತ್ತು ಮನೆಯ ಬಾಗಿಲ ಸಂದಿಯಲ್ಲಿ ಯಾವುದೋ ಒಂದು ಸಭೆ ನಡೆಯುತ್ತಿತ್ತು. ನನ್ನ ಮನೆಯಲ್ಲಿ ನನ್ನ ಅನುಮತಿ ಇಲ್ಲದೆ ನಡೆಯುತ್ತಿದ್ದ ಸಭೆ ಯಾವುದು ಅಂತ ಬಾಗಿಲನ್ನು ಸ್ವಲ್ಪ ಸರಿಸಿದೇ, ಸೊಳ್ಳೆಗಳ ದೊಡ್ಡ ಗುಂಪು ಅಲ್ಲಿ ಸೇರಿತ್ತು. ಒಂದು ದೊಡ್ಡ ಸೊಳ್ಳೆ ಸ್ವಲ್ಪ ಎತ್ತರದಲ್ಲಿ ಕುಳಿತು ಏನೋ ಸಂದೇಶವನ್ನು ನೀಡುತ್ತಿತ್ತು. ನಾನು ಇತ್ತೀಚಿಗೆ ಸ್ವಲ್ಪ ಸಮಯದಿಂದ ಈ ಪ್ರಾಣಿಗಳ ಭಾಷೆಯನ್ನು ಕಲಿತಿರುವುದರಿಂದ ಸೊಳ್ಳೆಗಳು ಏನು ಮಾತನಾಡುತ್ತಿವೆ ಅಂತ ಕದ್ದು ಕೇಳುವುದಕ್ಕೆ ಆರಂಭ ಮಾಡಿದೆ.

"ರೀತಿ ನೀತಿಗಳು ಇನ್ನು ಮುಂದೆ ಬದಲಾಗಬೇಕು, ಈಗ ಮನುಷ್ಯರು ರಕ್ತವನ್ನು ಕುಡಿಯದೇ ಇರುವ ಹಾಗೆ ಮಾಡಿಕೊಳ್ಳುವುದಕ್ಕೆ ಬೇರೆ ಬೇರೆ ದಾರಿಗಳನ್ನ ಹುಡುಕಿಕೊಂಡಿದ್ದಾರೆ. ಇದೆಲ್ಲವನ್ನ ಮೀರಿ ನಾವು ಬೆಳೆಯಬೇಕಾದರೆ ನಾವು ತರಬೇತಿ ಹೊಂದಬೇಕಾಗುತ್ತದೆ. ಅದಕ್ಕಾಗಿ ತರಬೇತಿ ಸಂಸ್ಥೆಯೊಂದನ್ನು ಆರಂಭಿಸಿದ್ದೇನೆ. ನೀವೆಲ್ಲರೂ ಅದಕ್ಕೆ ಸೇರಿಕೊಂಡರೆ ನಿಮ್ಮ ದೇಹದ ಶಕ್ತಿಯನ್ನು ಹೇಗೆ ವೃದ್ಧಿಸಿಕೊಳ್ಳಬಹುದು, ಔಷಧಿಗಳಿಂದ ನಿಮ್ಮ ಜೀವವನ್ನು ಹೇಗೆ ಕಾಪಾಡಿಕೊಳ್ಳಬಹುದು? ಯಾವ ಸ್ಥಳದಲ್ಲಿ ಪ್ರವೇಶಿಸಿ ರಕ್ತವನ್ನು ಹೀರುವುದಕ್ಕೆ ಸಾಧ್ಯ ಇದೆ? ಪ್ರತಿಯೊಬ್ಬ ಮನುಷ್ಯ ನಮ್ಮನ್ನ ಸಾಯಿಸುವುದಕ್ಕೆ ಬರುವಾಗ ಹೇಗೆ ತಪ್ಪಿಸಿಕೊಳ್ಳಬೇಕು? ಎಲ್ಲಿ ಅಡಗಿ ಕುಳಿತಿದ್ದರೆ ಮನುಷ್ಯರಿಗೆ ಅರಿವಾಗುವುದಿಲ್ಲ? ಇವೆಲ್ಲವು ತರಭೇತಿ ಸಿಗುತ್ತದೆ. ನೀವೆಲ್ಲರೂ ಅಲ್ಲಿಗೆ ಬಂದ್ರೆ ನಾವು ಹೆಚ್ಚು ಸಮಯ ಆರೋಗ್ಯವಂತರಾಗಿ ಬದುಕುವುದಕ್ಕೆ ಸಾಧ್ಯ ಇದೆ. ನಮಗೆ ಭಗವಂತ ಕೊಟ್ಟ ಕೆಲಸವನ್ನ ನಾವು ಸರಿಯಾಗಿ ನಿರ್ವಹಿಸಬೇಕು ಅಂತಿದ್ರೆ ತರಬೇತಿ ಅವಶ್ಯಕತೆ ಇದೆ ಅಂತ ಅಂದು ಸಭೆ ಮುಕ್ತಾಯವಾಯಿತು. ನನಗೆ ಈ ವಿಷಯ ಗೊತ್ತಾಗಿರುವುದರಿಂದ ನಿಮ್ಮ ಮುಂದೆ ಸುದ್ದಿಯನ್ನ ದಾಟಿಸುತ್ತಿದೆನೆ. ನಿಮಗೆಲ್ಲಾದರೂ ಈ ತರಬೇತಿಯ ಸ್ಥಳ ಗೊತ್ತಾಗಿ ಬಿಟ್ರೆ ಮೊದಲೇ ನಾಶ ಮಾಡಿಬಿಡಿ. ಇಲ್ಲವಾದರೆ ಬದುಕುವುದು ತುಂಬಾ ಕಷ್ಟವಾದೀತು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ