ಸ್ಟೇಟಸ್ ಕತೆಗಳು (ಭಾಗ ೧೧೨೩)- ರಾಶಿ
ಕಸದ ರಾಶಿ ಈಗೀಗ ಮೌನವಾಗಿದೆ. ಅದು ಮೌನವಾಗಿರುವುದಲ್ಲ, ಹಿಂದೆ ಮಾತನಾಡುತ್ತಿತ್ತು. ವಿಚಾರಗಳನ್ನ ಜನರಿಗೆ ದಾಟಿಸುತ್ತಾನೂ ಇತ್ತು. ಆದರೆ ಕೇಳುವ ವ್ಯವಧಾನವಿಲ್ಲದವರಿಗೆ ಹೇಳಿ ಪ್ರಯೋಜನವಿಲ್ಲ ಅಂದುಕೊಂಡು ಮೌನವಾಗಿ ಬಿಟ್ಟಿತು. ಮೊದಲು ಕಸದ ರಾಶಿಯ ಮಾತುಗಳು ಎಲ್ಲರಿಗೆ ಅನುಸರಿಸಲು ಯೋಗ್ಯವಾಗಿತ್ತು." ನೀವು ಎಲ್ಲೆಂದರಲ್ಲಿ ತಂದು ಸುರಿಯಬೇಡಿ ನನಗೆ ಅಂತಲೇ ನಿರ್ದಿಷ್ಟ ಸ್ಥಳವನ್ನು ನೀಡಿ ನೀವು ಸುರಿಯುವಾಗಲು ನಮ್ಮೆಲ್ಲರನ್ನ ವಿಭಾಗಿಸಿ ಸುರಿಯಿರಿ, ಅದು ನಮ್ಮನ್ನ ಕೊಂಡೊಯ್ಯುವವರಿಗೂ ಮತ್ತು ನಮ್ಮ ವಿಲೇವಾರಿಗೂ ತುಂಬಾ ಉಪಯೋಗವಾಗುತ್ತದೆ. ಕಸ ಮಾಡೋದೇ ನಿಮ್ಮ ಜೀವನದ ಅಂತಿಮ ಗುರಿಯಲ್ಲ. ಆದಷ್ಟು ನಮ್ಮನ್ನ ಕಡಿಮೆ ಮಾಡ್ತಾ ಹೋದ ಹಾಗೆ ನಿಮ್ಮ ಭವಿಷ್ಯ ಇನ್ನೂ ದೊಡ್ಡದಾಗಿರುತ್ತೆ. ನಮ್ಮನ್ನ ಅನಗತ್ಯವಾಗಿ ಸುಡಬೇಡಿ ಯಾವುದನ್ನು ಮತ್ತೆ ಬಳಕೆ ಮಾಡುವುದಕ್ಕೆ ಸಾಧ್ಯ ಇದೆಯೋ ಅದನ್ನು ಬಳಸಿ"
ಹೀಗೆ ಪ್ರತಿಸಲನೂ ತನ್ನ ಸುತ್ತಮುತ್ತ ಹಾದು ಹೋಗುವ ಎಲ್ಲರಿಗೂ ಹೇಳುತ್ತಿತ್ತು. ಓಟದ ಜಗತ್ತಿನಲ್ಲಿರುವವರಿಗೆ ಸಣ್ಣ ಶಬ್ದವು ಕಿವಿಗೆ ಕೇಳದ ಕಾರಣ ಅವುಗಳ ಮಾತು ವ್ಯರ್ಥವಾಯಿತು .ಹೇಳಿ ಹೇಳಿ ಸುಸ್ತಾಗಿ ಇದೀಗ ಮಾತನಾಡುವುದನ್ನೇ ನಿಲ್ಲಿಸಿ ಬಿಟ್ಟಿದೆ ಕಸದ ರಾಶಿ .ತನ್ನ ಮೇಲೆ ಬಿದ್ದದ್ದನ್ನೆಲ್ಲ ಏರಿಸಿಕೊಂಡು ಏರಿಸಿಕೊಂಡು ಪರ್ವತದ ಎತ್ತರವ ದಾಟಿದೆ. ಮುಂದೊಂದು ದಿನ ಮನುಷ್ಯರನ್ನೇ ಪೂರ್ತಿಯಾಗಿ ಆವರಿಸಿಕೊಂಡು ಅವರ ಮಾತನ್ನು ನಿಲ್ಲಿಸುವುದಕ್ಕೆ ಕಾಯುತ್ತಿದೆ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ