ಸ್ಟೇಟಸ್ ಕತೆಗಳು (ಭಾಗ ೧೧೨೫)- ಮುಪ್ಪು
ಸೂರ್ಯ ಬಾನಿನಿಂದ ಹಿಡಿದು ಸಮುದ್ರದ ದಡದಲ್ಲಿ ಆ ದಿನದ ವಿಶ್ರಾಂತಿಗಾಗಿ ಜಾರುತ್ತಿದ್ದಾನೆ. ಆತನ ಮಂದ ಬೆಳಕು ಮರಳಿನ ಮೇಲೆ ಬಿದ್ದು ಅಲ್ಲೂ ಸಂಜೆಯ ಪ್ರಶಾಂತತೆ ಹರಡಿದೆ. ಇಳಿ ಸಂಜೆ ಹೊತ್ತಲ್ಲಿ ಇಳಿಯ ವಯಸ್ಸಿನ, ಮುಖದ ಮೇಲೆ ನೆರಿಗೆಯನ್ನು ಹೊಂದಿಸಿಕೊಂಡು ಜೀವನ ಅಸ್ತಂಗತವಾಗುವ ಕೊನೆಯ ಒಂದಷ್ಟು ದಿನಗಳನ್ನು ಎಣಿಸುತ್ತಿರುವ ಅಜ್ಜಿ ಒಬ್ಬರು ನಿಂತಿದ್ದಾರೆ. ದೇಹದಲ್ಲಿ ಅಷ್ಟೇನೂ ಶಕ್ತಿ ಇಲ್ಲ ಸಮುದ್ರ ತೀರವನ್ನು ತದೇಕ ಚಿತ್ತದಿಂದ ಗಮನಿಸುತ್ತಲೇ ಇದ್ದಾರೆ. ಮರಳಿ ಬರುತ್ತಿರುವ ಅಲೆಗಳನ್ನು ಕಂಡು ಜೀವನದ ಎಲ್ಲ ಘಟನೆಗಳು ಹಾದುಹೋದವು. ಕಳೆದುಕೊಂಡದ್ದು ಪಡೆದುಕೊಂಡದ್ದು ಕರಗಿದ್ದು ಒರಗಿದ್ದು, ಸೊರಗಿದ್ದು, ನೋವಿನಿಂದ ಅತ್ತದ್ದು, ಪ್ರೀತಿಯಿಂದ ಬೇಡಿದ್ದು, ಜೊತೆಗೆ ನಿಲ್ಲುತ್ತೇವೆ ಅಂದವರು ದೂರವಾದದ್ದು, ಪರಿಚಯವಿಲ್ಲದವರು ಆಸರೆಯಾದದ್ದು, ಎಲ್ಲ ಬದುಕಿನ ಕಥೆಗಳು ಆದಿಯಾಗಿ ನೆನಪಿನ ಜಾಲದಲ್ಲಿ ಸುಳಿಗಳು ಏರ್ಪಡುತ್ತಾ ಇದ್ದಾವೆ. ತನ್ನ ಮನಸ್ಸಿನ ಆಸೆಗಳೆಲ್ಲ ತೀರಿಸಿಕೊಳ್ಳುವ ಹಾಗೆ ಅಲ್ಲಿ ನಿಂತ ಸಣ್ಣ ಪುಟ್ಟ ಅಂಗಡಿಗಳಿಂದ ಇಷ್ಟವಾದುದನ್ನು ಖರೀದಿಸಿ ತಿನ್ನುತ್ತಿದ್ದಾಳೆ. ಮಕ್ಕಳ ಸಣ್ಣ ಸಣ್ಣ ಆಟಿಕೆಗಳನ್ನು ಕೈಯಲ್ಲಿ ಹಿಡಿದು ಸಂಭ್ರಮಿಸುತ್ತಿದ್ದಾಳೆ. ಈ ಭೂಮಿಯ ಮೇಲಿನ ಕೊನೆಯ ಕ್ಷಣಗಳನ್ನು ಅನುಭವಿಸಿ ತೆರಳುವ ಧಾವಂತದಲ್ಲಿ ಆಕೆ ಒಂದು ಹನಿ ಕಣ್ಣೀರು ಚೆಲ್ಲದೆ ಸಂಭ್ರಮದಿಂದ ಬದುಕನ್ನು ಅನುಭವಿಸುತ್ತಿದ್ದಾಳೆ. ಸೂರ್ಯನಿಗೆ ಕೈಮುಗಿದು ವಂದಿಸಿದ್ದಾಳೆ. ನನ್ನ ಸಾವಿಗೂ ಆದಷ್ಟು ಬೇಗ ಸಮಯ ಒದಗಿಸಿಕೊಡು. ನಾನು ಮುಗಿಲ ಮೇಲೇರಿ ನಿಂತು ಈ ಜನರನ್ನು ಗಮನಿಸಬೇಕು. ಒಟ್ಟಿನಲ್ಲಿ ಸೂರ್ಯ ಇಳಿಯುತ್ತಿರೋ ಹಾಗೆ ಬಾನು ಕಪ್ಪಾಗುತ್ತಿದೆ. ಬೆಳಕಿಲ್ಲದ ತೀರವು ಆಕೆಯ ಮೊಗದ ಕಣ್ಣುಗಳಿಂದ ಹೊರಟ ಬೆಳಕು ದಾರಿ ತೋರಿಸುತ್ತಿದೆ. ಸಾಗುತ್ತಿದ್ದಾಳೆ, ಸಮುದ್ರವೂ ಅವಳನ್ನು ಕೊನೆಯ ಬಾರಿ ಲಯದಂತೆ ದೂರದಿಂದಲೇ ನೋಡುತ್ತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ