ಸ್ಟೇಟಸ್ ಕತೆಗಳು (ಭಾಗ ೧೧೨೯)- ಹಣತೆ

ಸ್ಟೇಟಸ್ ಕತೆಗಳು (ಭಾಗ ೧೧೨೯)- ಹಣತೆ

ಹಣತೆಗಳೆಲ್ಲ ಮನೆಯಿಂದ ಹೊರ ಬಂದವು. ಇಷ್ಟು ದಿನದವರೆಗೆ ತಮ್ಮ ಆಗಮನಕ್ಕಾಗಿ ಎದುರು ನೋಡುತ್ತಿದ್ದ ದಿನ  ಬಂದಿರಲಿಲ್ಲ. ವರ್ಷವಾಯಿತೋ ಏನು ಮನೆಯಿಂದ ಹೊರ ಬರದೆ. ಬರಿಯ ಕತ್ತಲೆಯೊಳಗೆ ಕುಳಿತಿದ್ದವರಿಗೆ ಬೆಳಕನ್ನು ಬೀರುವ ಸಂತಸದ ಗಳಿಗೆ ಕೂಡಿ ಬಂತು. ಹೊರಬಂದು ಸ್ವಚ್ಛದಿಂದ ಓರಣಗೊಂಡು ಮನೆಯ ಮುಂದೆಲ್ಲಾ ಅಲಂಕರಿಸಿಕೊಂಡು ಸಂಭ್ರಮದಿಂದ ನಿಂತವು. ತಮ್ಮ ಜೊತೆಗಾರರಾಗಿ ಎಣ್ಣೆ ಬತ್ತಿಗಳು ಸೇರಿಕೊಂಡು ಮನೆಯನ್ನ ಬೆಳಗುವುದ್ದಕ್ಕೆ ಪ್ರಾರಂಭವಾದವು. ಬೆಳಕಿನಿಂದ ಮನೆ ತುಂಬಿ ಹೋಗಿತ್ತು. ಆದರೆ ಹಣತೆಗೆ ಒಂದು ಜೋರು ಅಹಂಕಾರವಿಲ್ಲ. ತನ್ನಿಂದಲೇ ಬೆಳಕು ಬೀರುತ್ತಿದೆ ಎನ್ನುವ ಅಹಂ ಇಲ್ಲ. ಎಣ್ಣೆಗೂ ಎಲ್ಲ ಬತ್ತಿಗೂ ಇಲ್ಲ. ಮೂವರು ಸೇರಿಕೊಂಡು ತಮ್ಮ ಒಪ್ಪಿತ ಕಾರ್ಯವನ್ನು ಚಂದದಿಂದ ನಿರ್ವಹಿಸುತ್ತಿದ್ದಾರೆ. ಮುಂದಿನ ವರ್ಷದವರೆಗೂ ಕಾಯಲೇಬೇಕು ಮತ್ತೆ ಹೊರಬರುವುದಕ್ಕೆ. ಇದ್ದಷ್ಟು ದಿನ ಸಂಭ್ರಮದಿಂದ ಬೆಳಕು ಬೀರಿ ಮನೆಯವರ ಮೊಗದಲ್ಲಿ ನಗುತರಿಸಿ  ಮನದೊಳಗಿನ ಬೆಳಕನ್ನು ಹೆಚ್ಚಿಸಿ ಮತ್ತೆ ಗೂಡು ಸೇರಿಕೊಳ್ಳುತ್ತಾರೆ. ಅವರಿಗೆ ಒಂದಿನಿತೂ ಬೇಸರವಿಲ್ಲ. ಕೆಲವೇ ದಿನಗಳಷ್ಟೇ ತಮ್ಮನ್ನ ಬದುಕಿಸುತ್ತಾರೆ ಅಂತಹ ಬದುಕು ಮಾದರಿಯಾಗಬೇಕಲ್ಲವೇ ನಮಗೆ. ಹಣತೆ ನಕ್ಕು ಬೆಳಕು ಬೀರಿ ಮತ್ತೆ ಮರೆಯಾಗಿ ಮುಂದಿನ ಕಾಲದವರೆಗೂ ಕಾಯುತ್ತಿತ್ತು…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ