ಸ್ಟೇಟಸ್ ಕತೆಗಳು (ಭಾಗ ೧೧೩೦)- ಬಿಂದು

ಸ್ಟೇಟಸ್ ಕತೆಗಳು (ಭಾಗ ೧೧೩೦)- ಬಿಂದು

ಬಿಂದುಗಳನ್ನು ಜೋಡಿಸುವುದಕ್ಕೆ ಒಂದಷ್ಟು ಸಮಯ ಕಾಯಬೇಕು. ಕೆಲವೊಂದು ಸಲ ಸಂಬಂಧದ ಬಿಂದುಗಳನ್ನು ನಾವೇ ನಮಗನ್ನಿಸಿದ ಹಾಗೆ ಜೋಡಿಸಿ ಬಿಡುತ್ತೇವೆ. ಆನಂತರ ನಮಗೆ ಬೇಕಾದ ರೇಖಾಚಿತ್ರಗಳನ್ನು ಚಿತ್ರಿಸಿಕೊಳ್ಳುತ್ತೇವೆ. ಆದರೆ ಆ ಚಿತ್ರ ನಿಜವೋ ಸುಳ್ಳೋ ಅನ್ನುವುದು ಅರ್ಥವಾಗದೆ ಹಾಗೆ ಬದುಕ್ತಾನೂ ಇರುತ್ತೇವೆ. ಮುಂದೊಂದು ದಿನ ನಿಜವಾದ ಚಿತ್ರ ಏನು ಅನ್ನೋದನ್ನ ನಮಗರಿವಾದಾಗ ಇಷ್ಟು ದಿನ ನಾವು ಜೋಡಿಸಿದ ಬಿಂದುಗಳು ನಮ್ಮನ ನೋಡಿ ನಗುತ್ತವೆ ಅಥವಾ ನಮ್ಮ ಯೋಚನೆಗಳು ನಮ್ಮನ್ನ ಹಂಗಿಸುತ್ತವೆ.  ಹಾಗಾಗಿ ಬಿಂದುಗಳನ್ನು ಜೋಡಿಸುವಾಗ ಎಚ್ಚರವಿರಲಿ.  ಸಂಬಂಧದ ಬಿಂದುಗಳು ನಮ್ಮ ಕಣ್ಣ ಮುಂದೆ ಕಾಣುತ್ತವೆ. ಅಕ್ಕ ಪಕ್ಕದಲ್ಲಿ ಓಡಾಡೋರು, ದೂರದಲ್ಲಿ ನಿಂತು ಮಾತನಾಡುವವರು, ಮುಖ ಸಿಂಡರಿಸಿಕೊಂಡವರು, ಸಿಟ್ಟು ಹೆಚ್ಚಾಗಿರುವರು, ಪ್ರೀತಿ ತೋರಿಸುವವರು, ಹೀಗೆ ಎಲ್ಲರೂ ಸಂಬಂಧದ ಬಿಂದುಗಳನ್ನು ಹೊತ್ತುಕೊಂಡು ಅಲ್ಲಲ್ಲಿ ಕಾಣಸಿಗುತ್ತಾರೆ. ಅದನ್ನ ಗಮನಿಸಿ ನಾವು ಬಿಂದುಗಳನ್ನ ಜೋಡಿಸುತ್ತೇವೆ. ಮುಂದೊಂದು ದಿನ ಅದು ನಿಜವೂ ಆಗಬಹುದು, ಸುಳ್ಳು ಆಗಿರಬಹುದು, ಹಾಗಾಗಿ ಬಿಂದುಗಳನ್ನು ಹಾಗೆ ಬಿಟ್ಟು ಒಂದಷ್ಟು ಸಮಯದವರೆಗೆ ಕಾಯಿರಿ. ಆ ಬಿಂದುಗಳು ಸರಿಯಾಗಿದ್ದಾವೆ ಅನ್ನೋದು ನಮ್ಮರಿವಿಗೆ ಬಂದಾಗ ಮಾತ್ರ ಆ ಬಿಂದುಗಳನ್ನು ಜೋಡಿಸಿ ಸಂಬಂಧದ ಚಿತ್ರಗಳನ್ನು ಚಿತ್ರಿಸಿಕೊಳ್ಳಿ.  ಆಗ ನಮ್ಮ ಮನಸ್ಸು ನೆಮ್ಮದಿಯಲ್ಲಿರುತ್ತೆ ,ಬದುಕಿಗೊಂದು ಅರ್ಥ ಇರುತ್ತೆ. ಎಚ್ಚರವಿರಲಿ ಸಂಬಂಧದ ಬಿಂದುಗಳನ್ನ ಜೋಡಿಸುವಾಗ ಯೋಚನೆ ಇರಲಿ ....ಹೀಗೆ ಸಂಬಂಧದ ಬಿಂದುಗಳನ್ನ ಅಪಾರ್ಥ ಮಾಡಿಕೊಂಡು ಒಂದಷ್ಟು ನೋವನ್ನು ಅನುಭವಿಸಿದವನೊಬ್ಬ ತನ್ನ ಡೈರಿಯ ಮುಖ ಪುಟದಲ್ಲಿ ದಪ್ಪ ಅಕ್ಷರದಲ್ಲಿ ಬರೆದಿದ್ದ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ