ಸ್ಟೇಟಸ್ ಕತೆಗಳು (ಭಾಗ ೧೧೩೨)- ದ್ರಾಕ್ಷಿ

ಸ್ಟೇಟಸ್ ಕತೆಗಳು (ಭಾಗ ೧೧೩೨)- ದ್ರಾಕ್ಷಿ

ಅಡುಗೆ ಮನೆಯ ಮೂಲೆಯಲ್ಲಿ ಕುಳಿತಿದ್ದ ಒಂದು ದ್ರಾಕ್ಷಿ ತುಂಬ ನೋವಿನಿಂದ ಅಳ್ತಾ ಇತ್ತು. ಹೇಗೋ ತಿನ್ನಬೇಕು ಅಂತ ಬಾಯಿಗೆ ಇಟ್ಟವನಿಗೆ ಅಳುವಿನ ಶಬ್ದ ಕೇಳಿ ಅದನ್ನ ಮಾತನಾಡಿಸುವುದಕ್ಕೆ ಆರಂಭ ಮಾಡಿದೆ...

"ಅಣ್ಣ ನನ್ನ ಬದುಕು ತುಂಬಾ ಚೆನ್ನಾಗಿತ್ತು ಆದರೆ ನಾನು ತೆಗೆದುಕೊಂಡ ಕೆಲವು ನಿರ್ಧಾರವೇ ನನ್ನನ್ನು ಇವತ್ತು ಈ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಅಪ್ಪ ಗಟ್ಟಿಯಾಗಿ ಹೇಳಿದ್ರು ಯಾವತ್ತೂ ಗುಂಪನ್ನು ಬಿಟ್ಟು ಹೋಗಬೇಡ ನನ್ನೊಬ್ಬನಿಂದಲೇ ಸಾಧನೆ ಆಗುತ್ತೆ ಅಂತ ಅಂದುಕೊಳ್ಳಬೇಡ, ನೀನು ಕಾಲ ಕಸ ಆಗ್ತೀಯಾ? ಅಂತ ನನಗೆ ಅವರ ಜೊತೆ ಇದ್ದು ನಾನು ಏನು ಅನ್ನೋದನ್ನ ತೋರಿಸೋದ್ದಕ್ಕೆ ಆಗೋದಿಲ್ಲ ಅಂದುಕೊಂಡು ಅವರಿಂದ ಬೇರ್ಪಟ್ಟೆ. ಒಬ್ಬನೇ ಮಾರುಕಟ್ಟೆಯಲ್ಲಿ ಇಳಿದುಬಿಟ್ಟೆ ನನ್ನಂತೆ ಒಂದಷ್ಟು ಜನ ಅವರು ಕೂಡ ಬೇರ್ಪಟ್ಟು ಮಾರಾಟಕ್ಕೆ ನಿಂತು ಬಿಟ್ರು. ಆದರೆ ಬಂದವರೆಲ್ಲರೂ ಕೂಡ ಗೊಂಚಲನ್ನೇ ತೆಗೆದುಕೊಂಡು ಹೋದರೆ ಹೊರತು ನಮ್ಮನ್ನ ಕಣ್ಣೆತ್ತಿಯೂ ನೋಡ್ಲಿಲ್ಲ. ನಾವು ಅವರಿಗೆ ಆ ಕ್ಷಣದಲ್ಲಿ ಸಿಹಿಯೋ ಹುಳಿಯೋ ಅನ್ನುವುದು ನೋಡುವುದಕ್ಕೆ ಮಾತ್ರ ಬಳಕೆಯಾಗ್ತೀದ್ವಿ. ನಿಮ್ಮ ಮನೆಗೂ ನಾನು ಹಾಗೆ ರಾಶಿಯಲ್ಲಿ ಬಂದವ. ನನಗೆ ಅಲ್ಲಿ ಬೆಲೆನೂ ಸಿಗ್ತಾ ಇರಲಿಲ್ಲ ಗುಂಪಲ್ಲಿದ್ದಾಗ ಹೆಚ್ಚಿನ ಬೆಲೆ ಕೇಳುತ್ತಿದ್ದವರು ನಮ್ಮಂತ ರಾಶಿಗಳನ್ನು ನೋಡಿ ಬೆಲೆನೇ ಕಟ್ತಾ ಇರ್ಲಿಲ್ಲ. ನನಗೆ ಅರ್ಥ ಆಯ್ತು ಎಲ್ಲಿ ಒಬ್ಬಂಟಿಯಾಗಿರಬೇಕು ಎಲ್ಲಿ ಗುಂಪಿನಲ್ಲಿರಬೇಕು ಅಂತ ನನ್ನ ತಪ್ಪು ನೀವು ಮಾಡಬೇಡಿ. ದ್ರಾಕ್ಷಿಯ ಮಾತನ್ನು ಕೇಳಿ ನನ್ನ ನಿರ್ಧಾರಗಳು ಕೆಲವು ಬದಲಾದವು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ