ಸ್ಟೇಟಸ್ ಕತೆಗಳು (ಭಾಗ ೧೧೩೪)- ಬಂದಿ
ಅವನೊಬ್ಬನಿದ್ದ, ಕಿಟಕಿಯ ಸರಳ ಹಿಡಿದುಕೊಂಡು ಹೊರಬರಲಾಗದೆ ಚಡಪಡಿಸುತ್ತಿದ್ದ ಈ ಕಿಟಕಿಯ ಸರಳುಗಳನ್ನ ಹಿಡಿದುಕೊಂಡು ಗೋಗರೆಯುತ್ತಿದ್ದ. ಇವು ನನ್ನನ್ನು ಬಂಧಿಸಿವೆ, ಜೀವ ಹಿಂಡುತ್ತಿವೆ ನನ್ನೊಳಗೆ ಅವಕಾಶವಿದೆ, ಸಾಮರ್ಥ್ಯವಿದೆ, ಅದ್ಭುತವಾದ ಚಿಂತನೆಯ ಶೈಲಿ ಇದೆ, ನನ್ನಿಂದ ಎಲ್ಲವೂ ಸಾಧ್ಯ ಇದೆ ಹೀಗೆ ಎಲ್ಲವನ್ನೂ ಅಂದುಕೊಳ್ಳುತ್ತಿದ್ದವ ಆದರೆ ಪ್ರತಿದಿನವೂ ಅದೇ ಕಿಟಕಿಯ ಮುಂದೆ ನಿಂತು ಅಳುತ್ತನೇ ಇದ್ದ. ದೇಹ ಸೊರಗಿತು ಆತನಿಂದ ಸಾಧ್ಯವಾಗುವುದು ಯಾವುದು ಆಗಲೇ ಇಲ್ಲ . ಆತ ಅಲ್ಲೇ ಮುಂದುವರೆದ ಒಂದು ದಿನವೂ ಗಮನಿಸಲಿಲ್ಲ ಗೋಡೆಗಳಲ್ಲಿ ದೊಡ್ಡ ದೊಡ್ಡ ಬಾಗಿಲುಗಳಿವೆ ಆ ಬಾಗಿಲುಗಳಿಗೆ ಚಿಲಕವಿಲ್ಲ. ತೆರೆದು ಆರಾಮವಾಗಿ ಹೊರಗಡೆ ಹೋಗಬಹುದು, ಹೊಸ ಹೊಸ ಅವಕಾಶಗಳನ್ನು ನೋಡಬಹುದು. ಆತ ಕಿಟಕಿಯ ಮುಂದೆ ನಿಂತು ಒರಗಿ ಸತ್ತು ಹೋದನೇ ವಿನಃ ಬಾಗಿಲುಗಳನ್ನು ತೆರೆದು ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲೇ ಇಲ್ಲ. ಆತ ಉಳಿದೆ ಬಿಟ್ಟ. ನೀವು ಒಂದು ಸಲ ಕಿಟಕಿ ಬಾಗಿಲು ತೆರೆದು ನೋಡಿ ನಿಮ್ಮೊಳಗೂ ಕಿಟಕಿಗೆ ಜೋತು ಬಿದ್ದಿರುವ ಒಂದಷ್ಟು ಅಸ್ಥಿ ಪಂಜರಗಳು ಕಾಣಬಹುದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ