ಸ್ಟೇಟಸ್ ಕತೆಗಳು (ಭಾಗ ೧೧೩೭)- ಹಕ್ಕಿ ಪಾಠ
ಆ ಎರಡು ಪುಟ್ಟ ಹಕ್ಕಿಗಳು ತುಂಬಾ ಗಟ್ಟಿಯಾಗಿ ನಂಬಿಕೊಂಡಿದ್ದವು, ನಮ್ಮಪ್ಪ ಅಮ್ಮ ನಮ್ಮನ್ನ ಇಲ್ಲೇ ಇರೋದಕ್ಕೆ ಹೇಳಿ ಹೋಗಿದ್ದಾರೆ ನಾವು ಅವರ ಮಾತನ್ನು ಮೀರಬಾರದು. ಹಾಗಾಗಿಯೇ ಜೋರು ಗಾಳಿ ಬೀಸ್ತಾ ಇತ್ತು, ಮಳೆಯ ಹನಿ ಬಿರುಸಾಯಿತು ಆದರೂ ಆ ಎರಡು ಹಕ್ಕಿಗಳು ಅಲ್ಲಿಂದ ಕದಲುವುದು ಕಾಣಲೇ ಇಲ್ಲ. ಹೇಗೂ ಮನೆಯಲ್ಲಿ ಸುಮ್ಮನಿದ್ದವ ಹಾಗೆ ನಿಂತು ನೋಡುವುದಕ್ಕೆ ಆರಂಭ ಮಾಡಿದೆ. ಹತ್ತಿರ ಹೋಗಿ ಇನ್ನೊಂದಷ್ಟು ಜೋರು ಸ್ವರದಲ್ಲಿ ಹೆದರಿಸಿದರೂ ಕೂಡ ಆ ಎರಡು ಹಕ್ಕಿಗಳು ಅಲ್ಲಿಂದ ಮಿಸುಕಾಡಲೇ ಇಲ್ಲ. ಸೂರ್ಯ ಮುಳುಗುವ ಸಮಯವಾಯಿತು ಎಲ್ಲಿದ್ದವೋ ಎರಡು ಹಕ್ಕಿಗಳು ಹಾರಿ ಬಂದು ಆ ಹಕ್ಕಿಗಳ ಸುತ್ತ ಪ್ರೀತಿಯಿಂದ ಮಾತನಾಡಲು ಪ್ರಾರಂಭ ಮಾಡಿದವು. ಹಕ್ಕಿಗಳ ಮುಖದಲ್ಲೂ ಸಂತೋಷ. ನಂಬಿಕೆ ಉಳಿಸಿಕೊಂಡಿದ್ದರು ಮಕ್ಕಳು ಹಾಗೂ ತಂದೆ ತಾಯಿಗಳು. ನಂಬಿಕೆ ಗಟ್ಟಿಯಾದಷ್ಟು ಪ್ರತಿಫಲಗಳು ಹಾಗೆ ನಮ್ಮನ್ನ ಹುಡುಕಿಕೊಂಡು ಬರುತ್ತವೆ. ಪಾಠ ಕಲಿಸಿ ಹಾರಿ ಹೋಗಿಬಿಟ್ಟವು ಹಕ್ಕಿಗಳ ಕುಟುಂಬ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ