ಸ್ಟೇಟಸ್ ಕತೆಗಳು (ಭಾಗ ೧೧೩) - SOMEಗೀತ

ಜನ ಮಲಗಿದ್ದರೂ ಊರು ಮಲಗಿರಲಿಲ್ಲ. ಅಲ್ಲಲ್ಲಿ ಬೆಳಕಿತ್ತು, ಕೆಲವೊಂದು ಚಕ್ರಗಳು ರಸ್ತೆ ಮೇಲೆ ಚಲಿಸುತ್ತಿದ್ದವು, ನಾಯಿಗಳ ಸವಾರಿ ಆರಂಭವಾಗಿತ್ತು. ಅದೇನು ತಿರುವಿನಿಂದ ಕೂಡಿದ ಜಾಗವಲ್ಲ !. ಹೊಂಡ ಗುಂಡಿಯಿಲ್ಲ. ಅಲ್ಲಿ ಆತ ಗಾಡಿಯಿಂದ ಕೆಳಕ್ಕೆ ಬಿದ್ದ. ನಾಯಿಯೊಂದು ಅಡ್ಡ ಚಲಿಸಿದ ಪರಿಣಾಮ ಅದರ ಪ್ರಾಣರಕ್ಷಣೆಗೆ ಒತ್ತಿದ ಬ್ರೇಕು ಇವನ ಜೀವನವನ್ನೇ ಬದಲಾಯಿಸಿದ್ದು ವಿಪರ್ಯಾಸ. ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು. ಪ್ರಯತ್ನಕ್ಕೆ ಫಲ ಸಿಗದೆ ಬುದ್ದಿಮಾಂದ್ಯತೆ ಆರಿಸಿತು. ಅಫಘಾತದ ಹಿಂದಿನದು ನೆನಪಿದೆ. ಮುಂದಿನ ಜೀವನ ಬರಿಯ ಶೇಷವಾಗಿದೆ. ಹೆತ್ತವರ ಪ್ರಯತ್ನಗಳು ಹತ್ತು ವರ್ಷವಾದರೂ ಇನ್ನೂ ನಿಂತಿಲ್ಲ. ದೇಹಕ್ಕೆ 28 ಮನಸ್ಸಿನ್ನೂ ಮಗು. ಮಾತೊಂದು ಕಷ್ಟಪಟ್ಟು ತೊದಲು ನುಡಿಯಾಗಿ ಅಲ್ಲಲ್ಲಿ ಹೊರಬರುತ್ತದೆ. ಆದರಿಲ್ಲೊಂದು ವಿಶೇಷವಿದೆ. ಸಂಗೀತ ಸಿದ್ಧಿಸಿದೆ. ದಿನವಿಡೀ ಹಾರ್ಮೋನಿಯಂ, ಪಿಯಾನೋ ಮುಂದೆ ಕುಳಿತು ನುಡಿಸುತ್ತಾನೆ. ರಾಗ ಸಂಯೋಜಿಸುತ್ತಾನೆ. ಶ್ರುತಿ-ತಾಳ-ಲಯಗಳು ಹಿಡಿದಿದ್ದಾನೆ .SOMEಗೀತದಲ್ಲಿ ಏನೋ ಚೈತನ್ಯವಿದೆ. ಅವನ ನಗುವಿಗದೊಂದೇ ಕಾರಣ. ಅವನು ಹುಮ್ಮಸ್ಸಿಗೆ ಹೆತ್ತವರು ಸಂಗೀತಾಭ್ಯಾಸಿಗಳಾದರು. ಸ್ವರ ಏರಿಳಿತದಿಂದ ಸಾಗುತ್ತಿದೆ. ತಬಲ ನುಡಿಯುತ್ತಿದೆ, ಹಾರ್ಮೋನಿಯಂ ಪಿಸುಗುಟ್ಟುತ್ತಿವೆ, ಅವನೊಳಗಿನ ತಂತಿಯು ಮೀಟಿ ಮತ್ತೆ ಮೊದಲಿನಂತೆ ಆಗಲು ಸಂಗೀತವೇ ಪ್ರಯತ್ನಿಸುತ್ತಿದೆ. ಮುಂದಿನ ತಾಳವೇನೋ ರಾಗವೇನೋ ಗೊತ್ತಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ