ಸ್ಟೇಟಸ್ ಕತೆಗಳು (ಭಾಗ ೧೧೪೪)- ಚಟ
ಬೆಳಗಿನ ಮುಂಜಾವಿನ ಸೂರ್ಯ ಮೂಡುವ ಹೊತ್ತಿಗೆ ಮನೆಯ ರೇಡಿಯೋ ಹಾಡುತ್ತಿತ್ತು. ದಾಸನ ಮಾಡಿಕೋ ಎನ್ನಾ ದಾಸನ ಮಾಡಿಕೋ ಎನ್ನಾ...ಎಂದು. ಮಂದವಾಗಿ ಕೇಳುತ್ತಿರುವ ದೇವರ ವಾಣಿ ಮನೆಯಲ್ಲಿ ಹಚ್ಚಿರುವ ದೇವರ ಮುಂದಿನ ದೀಪ, ಸುವಾಸನೆ ಬೀರುತ್ತಿರುವ ಗಂಧದಕಡ್ಡಿ, ಇದೆಲ್ಲವೂ ಇದ್ದರೂ ಕೂಡ ಮನೆಯಮ್ಮನ ಮನಸ್ಸು ಪ್ರಶಾಂತವಾಗಿಲ್ಲ. ತನ್ನ ಮನೆಯ ಮಗ ಪ್ರತಿದಿನವೂ ದುಶ್ಚಟದ ಸೋಗಿಗೆ ಬಿದ್ದು ಜೀವನವನ್ನು ಹಾಳು ಮಾಡಿಕೊಂಡಿದ್ದಾನೆ. ದುಶ್ಚಟದ ದಾಸನಾಗಿದ್ದಾನೆ. ಒಂದು ದಿನವೂ ಪೊಲೀಸರನ್ನ ಹತ್ತಿರದಿಂದ ಕಾಣದೆ ಇದ್ದ ತಾಯಿ ,ಅವರೇ ಮನೆಯೊಳಕ್ಕೆ ಕಾಲಿಟ್ಟು ಮಗನನ್ನು ಎಳೆದುಕೊಂಡು ಹೋಗುವುದನ್ನು ನೋಡಿದ್ದಾಳೆ, ದಿನವೂ ಸುತ್ತಮುತ್ತಲಿನ ಎಲ್ಲರಿಂದ ತಪ್ಪುಗಳ ಪಟ್ಟಿಯನ್ನು ಕೇಳುತ್ತಿದ್ದಾಳೆ, ನೋವನ್ನು ಬಯಸಿದವಳು ಕಣ್ಣೀರಿನ ಶಾಪವನ್ನ ಕೇಳಿ ಕಿವಿ ಮುಚ್ಚಿಕೊಂಡಿದ್ದಾಳೆ .ಒಬ್ಬರಿಗೂ ಪುಟ್ಟ ಹಾನಿಯನ್ನು ಮಾಡದೆ ಇರುವ ಆ ತಾಯಿಯ ಮಗ ಮಾಡುತ್ತಿರುವ ಅನಾಚಾರಗಳ ಪಟ್ಟಿ ತುಂಬಾ ದೊಡ್ಡದಿದೆ .ಮಧ್ಯ ಗಾಂಜಾ ಇವುಗಳಿಗೆ ದಾಸನಾದವ ಸ್ಥಿರತೆಯ ಕಡೆದುಕೊಂಡು ಸಮಾಜಘಾತುಕನಾಗಿದ್ದಾನೆ. ತಿದ್ದುವ ಪ್ರಯತ್ನಗಳೆಲ್ಲವೂ ಮುಗಿದು ಹೋಗಿ ಸಾವೊಂದೆ ಉಳಿದುಬಿಟ್ಟಿದೆ. ಅವಳು ಆಗಾಗ ಯೋಚಿಸುತ್ತಾಳೆ ಉಸಿರು ನಿಲ್ಲಿಸಿ ಬಿಡೋಣ ಎಂದು. ಆಗ ತನ್ನ ಗಂಡನ ಕನಸಿನ ಈ ಮನೆ ಸ್ಮಶಾನವಾಗುತ್ತದೆ. ಹಾಗೆ ಕಣ್ಣೀರಿಳಿಸುತ್ತಾ ಬೇಡಿಕೊಳ್ಳುತ್ತಿದ್ದಾಳೆ, ಹುಟ್ಟಿಸಿದ ತಾಯಿಗೆ ಸಾಯಿಸುವ ಅನುಮತಿ ಆದರೂ ಕೊಡಿ ಅಥವಾ ನೀವಾದರೂ ಸರಿಪಡಿಸಿ ನನ್ನಿಂದ ಸಾಧ್ಯವಿಲ್ಲವೆಂದು ಕಣ್ಣೀರು ಇಳಿಸಿದ್ದಾಳೆ. ಈ ತೀವ್ರವಾದ ಶಾಪ ಆತನಿಗೆ ತಟ್ಟುತ್ತದೋ? ಜವಾಬ್ದಾರಿ ಯಾರದ್ದು? ಸಮಾಜದ್ದೋ ತಾಯಿಯದ್ದೋ? ರೇಡಿಯೋ ಕೂಗುತ್ತಿದೆ ಅಮ್ಮ ಆಳುತ್ತಿದ್ದಾಳೆ ಮಗನ ಕೋಣೆಯೊಳಗಿಂದ ಗಾಂಜಾದ ವಾಸನೆ ಹೊರಗಿಣುಕುತ್ತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ