ಸ್ಟೇಟಸ್ ಕತೆಗಳು (ಭಾಗ ೧೧೪೫)- ಪ್ರೀತಿ
ಮನೆ ಅಂಗಳದಲ್ಲಿ ಪರಿಚಿತವಲ್ಲದ ನಾಯಿಯೊಂದು ಮನೆಯವರಿಗೆ ಜೊತೆಯಾಗಿತ್ತು. ಗುರುತು ಪರಿಚಯವಿಲ್ಲದವನು ಆತ್ಮೀಯನಾಗಿದ್ದ. ಅವರೊಂದಿಗೆ ಒಡನಾಡಿಯಾಗಿದ್ದ ದಿನಕಳೆದಂತೆ ಮನೆಯ ಸದಸ್ಯನೂ ಆಗಿಬಿಟ್ಟ. ಮನೆಯವರ ಮತ್ತು ನಾಯಿಯ ಬಾಂಧವ್ಯ ಗಟ್ಟಿಯಾಗಿತ್ತು. ಆದರೆ ಆ ಕೆಲವು ದಿನಗಳಿಂದ ಆತ ಎಲ್ಲೂ ಕಾಣಿಸುತ್ತಿಲ್ಲ. ಎಷ್ಟೇ ಹುಡುಕಿದರೂ ಆತನ ಪತ್ತೆ ಇಲ್ಲ. ದೇವರ ಬಳಿ ಕೈ ಮುಗಿದು ಪ್ರಾರ್ಥಿಸಿದಾಗ ಮನೆಯಂಗಳದ ಪುಟ್ಟ ಗಿಡವೊಂದರಲ್ಲಿ ಪುಟ್ಟ ಹಕ್ಕಿಗಳು ಜೀವನ ಮಾಡೋದಕ್ಕೆ ಪ್ರಾರಂಭ ಮಾಡಿದವು. ನಾಯಿಯ ಪ್ರೀತಿಯನ್ನ ಈ ಹಕ್ಕಿಯಲ್ಲಿ ಕಾಣುವುದಕ್ಕೆ ಆರಂಭ ಮಾಡಿದ್ದರು. ಪ್ರೀತಿಸಿದರು ಮುದ್ದಿಸಿದರು ಪ್ರತಿದಿನ ಕುಶಲೊಪರಿ ವಿವಾರಿಸಿದರು. ಕೆಲವೇ ದಿನಗಳಲ್ಲಿ ಆ ಹಕ್ಕಿಗಳು ಬದುಕುತ್ತಿದ್ದ ಪುಟ್ಟ ಗಿಡ ತುಂಡಾಗಿ ಕೆಳಗೆ ಬಿದ್ದಿತ್ತು, ಹಕ್ಕಿಗಳು ಹಾರಿಹೋಗಿತ್ತು. ಮತ್ತೆ ಮನೆ ಮೌನವಾಯಿತು. ಮತ್ತೆ ಭಗವಂತನಲ್ಲಿ ಪ್ರಾರ್ಥಿಸಿದರು. ರಸ್ತೆಯಲ್ಲಿ ಓಡುತ್ತಿದ್ದ ಪುಟ್ಟ ಬೆಕ್ಕಿನ ಮರಿಯು ಮನೆಯ ಹೊಸ ಸದಸ್ಯನಾಯಿತು. ಪ್ರೀತಿ ತೋರಿಸುವುದಕ್ಕೆ ಯಾರಾದರೇನು? ಬೆಕ್ಕನ್ನ ಮನೆಯೊಳಕ್ಕೆ ತಂದು ಹಾರೈಕೆ ಮಾಡ್ತಾ ಪ್ರೀತಿಸತೊಡಗಿದರು. ಬೆಕ್ಕಿಗೂ ಅನ್ನವನ್ನು ಇದೇ ಮನೆಯಲ್ಲಿ ಬರೆದಿಟ್ಟರೋ ಏನೋ? ಒಟ್ಟಿನಲ್ಲಿ ಆ ಮನೆಯವರ ಪ್ರೀತಿಯನ್ನು ಹಂಚಿಕೊಳ್ಳುವುದಕ್ಕೆ ಒಬ್ಬರಲ್ಲದೆ ಇನ್ನೊಬ್ಬರು ಜೊತೆಯಾಗ್ತಾನೆ ಹೋಗ್ತಾ ಇದ್ರು. ದೈವ ನಿರ್ಣಯವೋ ಕಾಕತಳಿಯವೋ ಅದೃಷ್ಟವೋ ಗೊತ್ತಿಲ್ಲ, ಒಟ್ಟಿನಲ್ಲಿ ಪ್ರೀತಿಯನ್ನು ಹಂಚಿಕೊಳ್ಳುವುದಕ್ಕೆ ವ್ಯಕ್ತಿಗಳು ಪರಿಚಯವಾಗುತ್ತಾ ಹೋದರು. ಪ್ರೀತಿ ಎಲ್ಲೂ ನಿಲ್ಲಲೇ ಇಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ