ಸ್ಟೇಟಸ್ ಕತೆಗಳು (ಭಾಗ ೧೧೪೮)- ನಾಯಿಮಾತು
ನನ್ನ ನೋವು ನಿಮಗೆ ಯಾರಿಗೂ ಕೇಳ್ತಾ ಇಲ್ಲ. ನಾನು ನಿಮ್ಮ ಮನೆಯಲ್ಲಿ ಸಾಕುತ್ತಿರುವ ನಾಯಿ ಇರಬಹುದು, ಆದರೆ ನನಗೂ ಮನಸ್ಸಿದೆ ಭಾವನೆಗಳಿದೆ ಅದನ್ನ ಅರ್ಥ ಮಾಡಿಕೋಬೇಕಲ್ವಾ ನೀವು? ಆದರೆ ನೀವು ನಿಮ್ಮ ಸ್ವಾರ್ಥಕ್ಕೆ ನನ್ನ ಬಳಸಿಕೊಳ್ಳುತ್ತಿದ್ದೀರಾ? ಸುತ್ತ ಗೋಡೆ ಕಟ್ಟಿ ಪಂಜರದ ಹಾಗೆ ಮನೆ ಒಂದನ್ನು ಕಟ್ಟಿ ಅದರೊಳಗೆ ನನ್ನನ್ನ ಇರಿಸಿದ್ದೀರಿ . ಆಗಾಗ ನನಗೆ ತಿನ್ನೋದಕ್ಕೆ ಕುಡಿಯುವುದಕ್ಕೆ ಎಲ್ಲಾನೂ ಕೊಡುತ್ತೀರಿ. ಬಂದು ಮುದ್ದಿಸ್ತೀರಿ. ಎಲ್ಲವನ್ನು ಒಪ್ಪಿಕೊಳ್ಳುತ್ತೇನೆ. ನನಗೆ ಬೇಕಾದ ಸಂಗಾತಿಯ ಆಯ್ಕೆ ನನಗಿಲ್ಲ. ನಿಮಗೆ ಬೇಕಾದ ಸಂಗಾತಿಯನ್ನು ಆಯ್ಕೆ ಮಾಡಿ ನನ್ನ ಬಳಿಗೆ ಬಂದು ಬಿಡುತ್ತೀರಿ. ಅವನು ನನ್ನ ಮೇಲೆ ಮೃಗದ ರೀತಿ ವರ್ತಿಸುತ್ತಾನೆ ಅದೆಲ್ಲವನ್ನು ಸಹಿಸಿಕೊಂಡು ನಾನು ಅತ್ತು ಕರೆದರೂ ನಿಮಗೆ ಕೇಳೋದಿಲ್ಲ. ನಾನು ಗರ್ಭಿಣಿಯಾಗಿ ಸಣ್ಣ ಸಣ್ಣ ಮರಿಗಳನ್ನ ಹೆತ್ತಾಗ ನೀವು ಸಂಭ್ರಮ ಪಡುತ್ತೀರಿ, ಮತ್ತೆ ಮರಿಗಳನ್ನ ಮಾರಾಟ ಮಾಡ್ತೀರಿ. ಮತ್ತಷ್ಟು ಸಮಯ ಕಳೆದು ಇನ್ಯಾರನ್ನೋ ನನ್ನ ಬಳಿಗೆ ಬಂದು ಬಿಡುತ್ತೀರಿ. ನಾನು ನಿಮಗೆ ವ್ಯವಹಾರದ ಸರಕಾಗಿ ಬಿಟ್ಟಿದ್ದೇನೆ. ನನಗೆ ಇಷ್ಟ ಇರೋ ಸುತ್ತಮುತ್ತಲಿನ ಕೆಲವಾರು ನಾಯಿಗಳನ್ನು ಹತ್ತಿರ ಸೇರಿಸುವುದಕ್ಕೂ ಬಿಡುತ್ತಿಲ್ಲ. ನಿಮ್ಮನ್ನು ನಿಜವಾದ ಭಾವನೆ ಇರುವವರು ಅಂದುಕೊಳ್ಳಬೇಕಾ ನಾನು? ಪ್ರತಿದಿನ ಬೊಗಳುವ ಧನಿಯಲ್ಲಿ ನಿಮ್ಮ ಮೇಲೆ ಸಿಟ್ಟಿದೆ ಕ್ರೌರ್ಯವಿದೆ ನೋವಿದೆ .ಆದರೆ ನಿಮಗೆ ಯಾವುದು ಅರ್ಥ ಆಗ್ತಾ ಇಲ್ಲ. ಬರಿಯ ಬೊಗಳುವಿಕೆ ಮಾತ್ರ ಕೇಳುತ್ತಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ