ಸ್ಟೇಟಸ್ ಕತೆಗಳು (ಭಾಗ ೧೧೪೯)- ಚಲನಚಿತ್ರ
ನಿನ್ನ ಮೇಲೆ ಚಲನಚಿತ್ರಗಳೇ ತಯಾರಾಗ್ತಾ ಇವೆ. ನಿನಗದು ಅರ್ಥವಾಗ್ತಾ ಇಲ್ಲ. ನೀನು ಇದೊಂದು ಜೀವನ ಯಾತ್ರೆ, ನನ್ನ ಜೀವನವನ್ನು ನಾನು ಸಾಗಿಸಿದರೆ ಸಾಕು. ಹೀಗಂದುಕೊಂಡು ಬದುಕಬಹುದು, ಆದರೆ ನಿನ್ನ ಸುತ್ತ ಮುತ್ತ ಇರುವವರೆಲ್ಲ ಅವರ ಜೀವನದ ಚಲನಚಿತ್ರದಲ್ಲಿ ನಿನಗೆ ವಿವಿಧ ರೀತಿಯ ಪಾತ್ರಗಳನ್ನು ಸೃಷ್ಟಿಸುತ್ತಾರೆ. ಯಾರಿಗೂ ಅಣ್ಣನಾಗಿ ಗೆಳೆಯನಾಗಿ ಶತ್ರುವಾಗಿ ವಿರೋಧಿಯಾಗಿ ಹಾಸ್ಯಗಾರನಾಗಿ ತುಂಬಾ ಅಸಹ್ಯದ ವ್ಯಕ್ತಿಯಾಗಿ ಮೋಸಗಾರನಾಗಿ ಕೊಳಕನಾಗಿ ಜಿಪುಣನಾಗಿ ಅನುಕಂಪ ರಹಿತನಾಗಿ ಪ್ರಾಮಾಣಿಕನಾಗಿ ಹೀಗೆ ಒಬ್ಬೊಬ್ಬರು ಅವರಿಗೆ ಬೇಕಾದ ಹಾಗೆ ಪಾತ್ರ ಸೃಷ್ಟಿಸುತ್ತಾರೆ. ನೀನು ಅದನ್ನು ಪ್ರಶ್ನಿಸುವ ಹಾಗೆಯೂ ಇಲ್ಲ. ಯಾಕೆಂದರೆ ಅದು ಅವರ ಚಲನಚಿತ್ರ ಅವರೇ ನಿರ್ಧೇಶಕರು ಅವರಿಗೆ ಇಷ್ಟದ ಪಾತ್ರಗಳನ್ನು ಕೊಡುತ್ತಾರೆ. ಇಲ್ಲಿ ಅವರು ಹೇಳಿದಂತೆ ನೀನು ನಟಿಸಬೇಕಾಗಿಲ್ಲ. ನೀನು ನಿನ್ನಷ್ಟಕ್ಕೆ ಬದುಕಿದರೆ ಅವರ ಜೀವನದ ಚಲನಚಿತ್ರವು ಓಡುತ್ತದೆ. ಹೇಗೆ ನಿನ್ನ ಜೀವನದ ಚಲನಚಿತ್ರದಲ್ಲಿ ನಿನ್ನ ಸುತ್ತಮುತ್ತ ಪಾತ್ರಗಳ ರಾಶಿಯೇ ತುಂಬಿದೆಯಲ್ಲಾ, ಹಾಗೆಯೇ ಪ್ರತಿಯೊಬ್ಬರ ಜೀವನದ ಚಲನಚಿತ್ರದಲ್ಲೂ ಪಾತ್ರಗಳು ತುಂಬಿರುತ್ತವೆ. ನೀನು ಬೇರೆಯವರ ಚಲನಚಿತ್ರವನ್ನು ಶತದಿನೋತ್ಸವ ಆಚರಿಸುವುದರ ಕಡೆಗೆ ದುಡಿಯಬೇಡ, ನಿನ್ನ ಚಲನಚಿತ್ರ ನಿನ್ನ ಮನಸ್ಪೂರ್ತಿಗಾಗಿ ನಿನ್ನ ಹಿತೈಷಿಗಳ ಒಳಿತನ್ನು ಬಯಸಿದರೆ ಸಾಕು. ಹೀಗೆಂದವರು ನನ್ನ ಪರಿಚಿತರಲ್ಲ, ನನ್ನನ್ನು ಅರ್ಥ ಮಾಡಿಕೊಂಡವರಲ್ಲ. ಆ ಕ್ಷಣ ಭೇಟಿಯಾಗಿ ಮಾತನ್ನ ನೀಡಿ ಹೊರಟು ಹೋದರು. ಅವರು ನನ್ನ ಜೀವನದ ಚಲನಚಿತ್ರದಲ್ಲಿ ಒಂದು ಪಾತ್ರವಾಗಿಯೇ ಬಿಟ್ಟರು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ