ಸ್ಟೇಟಸ್ ಕತೆಗಳು (ಭಾಗ ೧೧೫೬)- ರಥ

ಅದ್ಭುತವಾದ ರಥ ನಮ್ಮನ್ನ ದಾಟಿಕೊಂಡು ಮುಂದೆ ಹೋಗಿಬಿಟ್ಟಿದೆ. ಆ ರಥ ನಮ್ಮ ಬಳಿಗೆ ಬರುವವರೆಗೆ ನಾವು ಕಾಯಬೇಕಿತ್ತು. ಅದ್ಬುತವಾಗಿ ಸಿಂಗಾರಗೊಂಡ ರಥದ ಹಿಂದೆ ಹಲವು ಜನರ ಪರಿಶ್ರಮವಿದೆ. ರಥ ಅಷ್ಟು ಸಾಮರ್ಥ್ಯವನ್ನು ತಾಳಿಕೊಂಡ ಕಾರಣ ಎಲ್ಲರ ಮುಂದೆ ವೈಭವದಿಂದ ದಾಟಿ ಮುಂದುವರೆಯುತ್ತಿದೆ. ಎಲ್ಲರೂ ಕೈಮುಗಿಯುತ್ತಾರೆ. ಗೌರವಿಸುತ್ತಾರೆ ಭಕ್ತಿಯಿಂದ ನಮಿಸುತ್ತಾರೆ. ರಥ ನಿಧಾನವಾಗಿಯಾದರೂ ಹೆಮ್ಮೆಯಿಂದ ನಮ್ಮ ಮುಂದೆ ದಾಟಿ ತನ್ನ ಗುರಿಯನ್ನು ತಲುಪುತ್ತದೆ. ರಥವನ್ನು ಎಳೆಯುತ್ತಿರುವವರೆಲ್ಲರ ಶಕ್ತಿಯಿಂದ ಮುಂದೆ ಮುಂದೆ ಹೋಗುತ್ತದೆ .ಯಾರೆಲ್ಲಾ ರಥವನ್ನ ನೋಡಲು ನಿಂತಿದ್ದಾರೋ ಅವರು ಕೊನೆಯವರೆಗೂ ನಿಂತು ನೋಡಬೇಕಷ್ಟೇ. ನಾವು ರಥವನ್ನು ನಿಂತು ನೋಡುವವರಾಗಬಾರದು. ರಥವಾಗಬೇಕು ರಥವನ್ನುನ್ನೆಳೆಯುವವರಾಗಬೇಕು, ರಥದಲ್ಲಿ ಸ್ಥಾಪಿತರಾಗಬೇಕು, ಹಾಗಾದರೆ ನಮ್ಮನ್ನು ನಿಂತು ಗೌರವದಿಂದ ನೋಡುವವರು ಸಿಗುತ್ತಾರೆ. ಎಲ್ಲಾ ಆಯ್ಕೆಗಳು ನಮ್ಮಲ್ಲಿದೆ. ನಾವು ನಿಂತು ನೋಡುತ್ತೇವೋ, ಏರಿ ಮೆರೆಯುತ್ತೇವೋ, ಎಳೆದು ಸಾಗುತ್ತೇವೋ ಆಯ್ಕೆ ನಮ್ಮದು.
ಅರ್ಥ ಆಯ್ತಾ ನಿನಗೆ. ದಾರಿಯಲ್ಲಿ ಸಿಕ್ಕಿದ ಹಿರಿಯರು ಹೇಳಿದ ಮಾತು ತುಂಬ ದೊಡ್ಡದಿತ್ತು. ಅದನ್ನ ಅರ್ಥ ಮಾಡಿಕೊಳ್ಳುವ ವಯಸ್ಸು ನನ್ನದಾಗಿತ್ತು. ಬರಿಯ ಕಿವಿಯಿಂದ ಇನ್ನೊಂದ ಕಿವಿಗೆ ದಾಟುವ ಬದಲು ಎದೆಗಿಳಿಸುವ ಪ್ರಯತ್ನ ಮಾಡಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ