ಸ್ಟೇಟಸ್ ಕತೆಗಳು (ಭಾಗ ೧೧೫೭)- ದನ
ಮನೆ ಕಟ್ಟುವಾಗ ರಾಮರಾಯರು ತುಂಬಾ ಯೋಚನೆ ಮಾಡಿ ಆಯಪಾಯ ನೋಡಿ ವಾಸ್ತು ಪ್ರಕಾರವೇ ಗಟ್ಟಿಯಾಗಿ ಕಟ್ಟಿದ್ದರು. ಮನೆ ಮುಂದೆ ಒಂದಿಷ್ಟು ಜಾಗ ಮಕ್ಕಳಿಗೆ ಆಡುವುದಕ್ಕೆ ಅಂತಲೇ ವಿಶಾಲವಾದ ಅಂಗಳ, ಮನೆಯ ಪಕ್ಕದಲ್ಲಿ ಒಂದು ಕೊಟ್ಟಿಗೆ, ಅದರಲ್ಲಿ ಒಂದಷ್ಟು ದನಕರು. ಇಡೀ ಮನೆಯವರೆಲ್ಲರೂ ಒಟ್ಟಾಗಿ ಬದುಕುವುದಕ್ಕೆ ರೂಪಿತವಾದ ಮನೆಯದು. ಅವರ ಕೆಲಸ ಮಾಡುವ ದೈಹಿಕ ಶ್ರಮದ ಶಕ್ತಿ ಮುಗಿದು ಮನೆಯಲ್ಲಿ ಕುಳಿತು ತಿನ್ನಬೇಕಾದ ಪರಿಸ್ಥಿತಿಯ ಎದುರಾದಾಗ ಅಧಿಕಾರ ಮಕ್ಕಳ ಕೈಯಲ್ಲಿತ್ತು. ಮಕ್ಕಳ ಕೈಗೆ ಅಧಿಕಾರ ಸಿಕ್ಕ ದಿನದಿಂದಲೇ ಜೊತೆಗಿದ್ದ ಅಣ್ಣತಮ್ಮಂದಿರು ಹೊಸದೊಂದು ಜಾಗವನ್ನೇ ಹುಡುಕಿಕೊಂಡರು. ತನ್ನ ಸ್ವಂತ ಮಕ್ಕಳೇ ಒಬ್ಬರಿಗೊಬ್ಬರ ಮುಖ ತಿರುಗಿಸಿ ಬದುಕುವುದನ್ನು ಕಂಡು ಮನೆಯೊಳಗೆ ನಾಲ್ಕಾಗಿದ್ದ ಕುಟುಂಬ ಬಾಗಿಲು ತೆರೆದು ಸೂಟ್ಕೇಸ್ ಹಿಡಿದು ಹೊರಟೇ ಬಿಟ್ಟರು. ಕೊಟ್ಟಿಗೆಯಲ್ಲಿ ಕಟ್ಟಿದ್ದ ದನಕರು ನೋಡಿಕೊಳ್ಳುವುದಕ್ಕೆ ಅಂತ ಕೆಲಸದವರನ್ನು ನೇಮಿಸಿದ್ದ ಕಾರಣ ಅವುಗಳಿಗೆ ಕಾಲಕಾಲಕ್ಕೆ ಹುಲ್ಲು ನೀರು ಸಿಕ್ತಾ ಇತ್ತು. ಅಲ್ಲಿ ದನಗಳು ಹೆಚ್ಚಾಗಿದ್ದಾವೆ ಹೊರತು ಕಡಿಮೆಯಾಗಿಲ್ಲ. ಆ ದನಗಳು ಒಂದು ದಿನವೂ ಜಗಳವಾಡಿಲ್ಲ . ಬದುಕುವುದಕ್ಕೆ ಕಷ್ಟ ಅಂತ ಯಾರಲ್ಲೂ ದೂರು ಹೇಳಿಲ್ಲ, ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು ಪ್ರತಿ ದಿನವೂ ಸಂಭ್ರಮದಿಂದಲೇ ಬದುಕುತ್ತಿದ್ದಾವೆ. ರಾಮರಾಯರು ಅಂಗಳದಲ್ಲಿ ನಿಂತು ಯೋಚಿಸುತ್ತಾರೆ. ಕೊಟ್ಟಿಗೆಯಂತ ಮನೆ ಬೇಕಾಗಿದೆ ಆದರೆ ದನಗಳಂತ ಮನುಷ್ಯರು ಸಿಗುತ್ತಿಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ