ಸ್ಟೇಟಸ್ ಕತೆಗಳು (ಭಾಗ ೧೧೬೧)- ಪಿಳಿ ಪಿಳಿ

ಸ್ಟೇಟಸ್ ಕತೆಗಳು (ಭಾಗ ೧೧೬೧)- ಪಿಳಿ ಪಿಳಿ

ಪುಟ್ಟ ಕಾಲುಗಳನ್ನ ಅಲ್ಲಾಡಿಸೋಕೆ ಆಗ್ತಾ ಇಲ್ಲ.‌ ಭಾರವಾಗಿದೆ ಎಂದಿಗಿಂತಲೂ ಹೆಚ್ಚಾಗಿ. ಅಮ್ಮ ನನ್ನನ್ನು ಬಿಟ್ಟು ದೂರ ಹೋಗ್ತಾನೆ ಇಲ್ಲ. ಮನೆಯಲ್ಲಿ ತುಂಬಾ ಖುಷಿಯಾಗಿತ್ತು, ಸುತ್ತ ಮುತ್ತ ಗಿಡಮರ ನಿಶಬ್ದ ವಾತಾವರಣ, ಎಲ್ಲೇ ಬೇಕಾದರೂ ಓಡಾಡ್ತಾ ಇರಬಹುದು, ಆದರೆ ಇದ್ಯಾವುದೋ ದೊಡ್ಡ ಕಟ್ಟಡದ ಒಳಗೆ ಕರೆದುಕೊಂಡು ಬಂದಿದ್ದಾರೆ. ಎಲ್ಲರೂ ಬಂದವರು ನನ್ನನ್ನು ಅಯ್ಯೋ ಪಾಪ ಎಂದು ಕನಿಕರದಿಂದ ನೋಡುತ್ತಿದ್ದಾರೆ. ದಿನಂಪ್ರತಿಯ ಹಾಗೆ ನನ್ನ ಬದುಕಿಲ್ಲ. ಏನೇನು ತಂದು ಚುಚ್ಚುತಿದ್ದಾರೆ, ಕೆಲವೊಂದಷ್ಟು ಕ್ಷಣ ನನಗೆ ಪ್ರಜ್ಞೆ ಇರ್ಲಿಲ್ಲ, ಎದ್ದು ನೋಡುವಾಗ ನನ್ನ ಕಾಲಿನ ತುಂಬಾ ಬಿಳಿಯಾದ ಬಟ್ಟೆಯನ್ನು ಕಟ್ಟಿ ಹೋಗಿದ್ದರು. ಅದು ತುಂಬಾ ಭಾರವಾಗಿತ್ತು. ಅಮ್ಮ ಅಪ್ಪ ಏನು ಹೇಳ್ತಾ ಇದ್ರು ನನಗೆ ಅದು ಅರ್ಥ ಆಗ್ತಾ ಇಲ್ಲ. ನನ್ನನ್ನು ಯಾಕೆ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಅನ್ನೋದು ಗೊತ್ತಿಲ್ಲ. ಅಪ್ಪ ಅಮ್ಮ ಜೊತೆಗಿದ್ದಾರೆ ಅಂದಮೇಲೆ ನನ್ನ ಒಳ್ಳೆಯದಕ್ಕೆ ಏನೋ ಮಾಡ್ತಾ ಇದ್ದಾರೆ ಅಂತ ನನಗೆ ಅನ್ನಿಸುತ್ತೆ ನಾನು ಅಳಬಾರದು, ನಾನು ಅತ್ತರೆ ಅಪ್ಪ ಅಮ್ಮನಿಗೆ  ನೋವಾಗುತ್ತೆ ಅಂತ. ಆದರೆ ನೋವು ತಡೆಯುವುದಕ್ಕೆ ಆಗುವುದಿಲ್ಲ ಹಾಗಾಗಿ ಅಳುತ್ತೇನೆ. ಇನ್ನೊಂದು ಸ್ವಲ್ಪ ದಿನ ಆಮೇಲೆ ನಾನು ಮನೆಗೆ ಹೋಗಬಹುದು ಅಂತೆ. ಎಂದಿಗಿಂತಲೂ ಚೆನ್ನಾಗಿ ಆಡಬಹುದಂತೆ. ಅಮ್ಮ ಅಪ್ಪ ಬಳಿ ಇರುವಾಗ ನನಗೆ ಯೋಚನೆ ಯಾಕೆ? ಆದ್ರೂ ಕಾಲುಭಾರ ಆಗ್ತಾ ಇದೆ. ನಿದ್ದೆ ಮಾಡೋಕು ಕಷ್ಟ ಆಗ್ತಾ ಇದೆ ಹೀಗೆ ಪುಟ್ಟ ಮಗುವೊಂದು ಶಸ್ತ್ರ ಚಿಕಿತ್ಸೆಯಾಗಿ ಆಸ್ಪತ್ರೆಯ ಬೆಡ್ಡಿನ ಮೇಲೆ ಮಲಗಿ ಪಿಳಿ ಪಿಳಿ ಬಿಡುವ ಕಣ್ಣುಗಳಿಂದ ನನ್ನನ್ನು ನೋಡುತ್ತಾ ಹೀಗೆ ಹೇಳ್ತಾ ಇದೆಯೇನೋ ಅನ್ನಿಸ್ತಾ ಇತ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ