ಸ್ಟೇಟಸ್ ಕತೆಗಳು (ಭಾಗ ೧೧೬೨)- ಒಳ ಹೊರಗೆ

ಸ್ಟೇಟಸ್ ಕತೆಗಳು (ಭಾಗ ೧೧೬೨)- ಒಳ ಹೊರಗೆ

ಸುತ್ತ ನೋಡುವ ಕಣ್ಣುಗಳು ಹೆಚ್ಚಾಗಿವೆ, ನೋಡುವ ಕಣ್ಣುಗಳೆಲ್ಲವೂ ಕೂಡ ಒಂದೊಂದು ಕಥೆಯನ್ನ ಸೃಷ್ಟಿಸಿಕೊಳ್ಳುತ್ತವೆ. ನೀನು ಭಯಪಡುವುದು ಬೇಡ ಆದರೆ ಹೊರಗೆ ನಿಂತ ಕಣ್ಣುಗಳು ಮಾತನಾಡುವುದಕ್ಕೆ ಆರಂಭವಾದಾಗ ದೊಡ್ಡ ಮಾತುಗಳನ್ನೇ ಹೇಳುತ್ತಾರೆ. ನಿನ್ನಿಂದ ಆಗೋದಿಲ್ಲ, ನೀನು ಸೋಲುತ್ತಿದ್ದೀಯಾ, ಮುಂದೆ ಹೆಜ್ಜೆ ಇಟ್ಟರೆ ಖಂಡಿತ ಸೋಲುತ್ತೀಯಾ, ಬೇಡ ನಿಲ್ಲಿಸಿ ಬಿಡು, ಜೀವನ ಕಷ್ಟ ಆಗಬಹುದು, ಪರಿಸ್ಥಿತಿ ತುಂಬಾ ಕೆಟ್ಟದಾಗಬಹುದು, ಒಳ್ಳೆಯದಾಗುವುದಿಲ್ಲ, ಮುಂದೆ ಹೆಜ್ಜೆ ತುಂಬಾ ಭಯಂಕರವಾಗಿದೆ, ನಿನ್ನಿಂದ ಇದ್ಯಾವುದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ, ನಿನ್ನಿಂದಾಗಿ ನಿನ್ನ ನಂಬಿದವರೆಲ್ಲರೂ ಕೂಡ ಕೊನೆಯಾಗಬಹುದು, ನಿನ್ನ ನಂಬಿಕೆ ಸಾಯಬಹುದು, ಹೀಗೆ ಹೊರಗಿನ ಮಾತುಗಳು ನಿನ್ನ ಮೇಲೆ ಆಕ್ರಮಣ ಮಾಡ್ತಾ ಇರ್ತವೆ. ಆದರೆ ಹೊರಗೆ ಕೇಳುವ ಮಾತುಗಳನ್ನ ಅನುಸರಿಸಿ ನೀನು ನಿರ್ಧಾರ ತೆಗೆದುಕೊಳ್ಳಬೇಡ, ಯಾಕೆಂದರೆ ನೀನು ನಿನ್ನೊಳಗೆ ನಿರ್ಧಾರಗಳನ್ನು ತೆಗೆದುಕೊಂಡರೆ ಮಾತ್ರ ನಿನ್ನಿಂದ ಸಾಧ್ಯವಿಲ್ಲ ಅಂತರ್ಥ. ನಿನ್ನೊಳಗಿನ‌ ಮಾತುಗಳು ಮಾತ್ರ ಸತ್ಯ, ಹೊರಗಡೆಯ ಕಣ್ಣುಗಳು ಹೇಳುವ ಮಾತುಗಳು ನಿನ್ನ ಬದುಕನ್ನು ನಿರ್ಧರಿಸುವುದಿಲ್ಲ. ನಿನ್ನೊಳಗೆ ಚೈತನ್ಯದ ಸಣ್ಣ ಕಿಡಿ ಇರುವವರೆಗೂ ನಿನ್ನ ಬದುಕು ಅದ್ಭುತವಾಗಿರುತ್ತೆ. ಹೆಜ್ಜೆ ಮುಂದೆ ಇಡುತ್ತಾ ಹೋಗುತ್ತಿರು. ಹಾಗೆ ದಾರಿಯಲ್ಲಿ ಸಿಕ್ಕವ ಪರಿಚಯವಿಲ್ಲದವ ನನ್ನ ಕೈ ಹಿಡಿದು ಹೇಳಿದ ಮಾತುಗಳು ಒಳಗೆ ಇನ್ನೊಂದಷ್ಟು ಶಕ್ತಿ ಕೊಡುವುದಕ್ಕೆ ಆರಂಭವಾಯಿತು. ನನ್ನಿಂದ ಸಾಧ್ಯವಿದೆ ಅಂತ ಅನ್ನಿಸಿತು. ಹೊರಗಡೆಯ ಮಾತನ್ನ ಕೇಳಬಾರದು ಅಂದ. ಈ ಮಾತುಗಳನ್ನು ಕೇಳಬೇಕೋ ಬೇಡ್ವೊ ಅನ್ನುವ ಗೊಂದಲದಲ್ಲಿ ಉಳಿದುಬಿಟ್ಟೆ. ಆದರೆ ಆತ ನಿಜವನ್ನೇ ಹೇಳಿದ್ದ. ನಿಮಗೂ ಅಗತ್ಯ ಇದ್ದರೆ ಇಲ್ಲಿಂದ ಪಡೆದುಕೊಳ್ಳಿ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ