ಸ್ಟೇಟಸ್ ಕತೆಗಳು (ಭಾಗ ೧೧೬೩)- ಕೊಲೆಗಾರ

ಸ್ಟೇಟಸ್ ಕತೆಗಳು (ಭಾಗ ೧೧೬೩)- ಕೊಲೆಗಾರ

ಇಲ್ಲಿ ಸಾಲು ಸಾಲು ಕೊಲೆಗಳಾಗುತ್ತಿವೆ. ಭೀಕರ ಹತ್ಯೆಗಳಾಗುತ್ತಿವೆ. ಅಲ್ಲಲ್ಲಿ ಕಣ್ಣೀರು ಕೂಡಾ ಇಳಿಯುತ್ತಿದೆ. ಆದರೆ ಎಲ್ಲೂ ಕೂಡಾ ಕೇಸು ದಾಖಲಾಗುತ್ತಿಲ್ಲ. ಇದರ ಬಗ್ಗೆ ಯಾರಿಗೂ ಗಮನವೂ ಇಲ್ಲ. ಇದನ್ನು ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ಕೊಲೆಗಾರ ಪ್ರತಿ ಸಲವೂ ತಪ್ಪಿಸಿಕೊಳ್ಳುತ್ತಿದ್ದಾನೆ. ಇಲ್ಲಿ ಒಬ್ಬ ಕೊಲೆಗಾರನಲ್ಲ. ಪ್ರತೀ ಹೆಜ್ಜೆ ಹೆಜ್ಜೆಗಳಲ್ಲೂ ಕೊಲೆಗಾರರು ಕಾಣಿಸಿಕೊಳ್ಳುತ್ತಿದ್ದಾರೆ. ಏನಾದರೂ ಆಗಲಿ, ಯಾರೂ ಇದರ ಬಗ್ಗೆ ಗಮನ ಹರಿಸದೇ ಇದ್ದರೂ ನಾನಿದನ್ನ ಕೂಲಂಕುಶವಾಗಿ ಗಮನಿಸಬೇಕು ಅಂದುಕೊಂಡು ಕೊಲೆಗಾರನನ್ನು ಹುಡುಕೋದಕ್ಕೆ ಪ್ರಾರಂಭ ಮಾಡಿದೆ. ಹಾಗೆ ಹುಡುಕ ಹೊರಟವನಿಗೆ ಮೊದಲ ಕೊಲೆಗಾರ ನನ್ನೊಳಗೆ ಕಂಡುಕೊಂಡಿದ್ದ. ಅವನಿಗೂ ಒಂದಷ್ಟು ಕನಸುಗಳಿತ್ತು. ಅವುಗಳನ್ನು ಕೊಂದು ಮುಂದೆ ಹೊರಟಿದ್ದ. ಹಾಗೆ ದಾರಿಯಲ್ಲಿ ಹಸ್ತ ಲಾಘವ ಮಾಡಿ ಎದುರಿನಿಂದ ನಕ್ಕು ಮುಂದುವರಿದ ಎಲ್ಲರೂ ಕೂಡಾ ಕೊಲೆಗಾರರಾಗಿದ್ದರು. ಅವರ ಜವಾಬ್ದಾರಿಗೋಸ್ಕರ ಆಸೆಗಳನ್ನು, ಕನಸುಗಳನ್ನು, ಯೋಚನೆಗಳನ್ನು, ಅಲೋಚನೆಗಳನ್ನು ಕೊಂದು ಮುಂದುವರೆದವರು. ಕೆಲವರು ಕನಸುಗಳಿಗೋಸ್ಕರ ಸಂಬಂಧಗಳನ್ನು ಕೊಂದರೆ, ಇನ್ನು ಕೆಲವರು ಸಂಬಂಧಗಳಿಗೋಸ್ಕರ ಕನಸುಗಳನ್ನು ಕೊಂದವರು. ಹುಡುಕಿ ಹುಡುಕಿ ಎಲ್ಲರೂ ಕೊಲೆಗಾರರೇ ಅಂದುಕೊಂಡು ಆ ಕೇಸ್ ಅನ್ನು ಶೋಧಿಸುವುದನ್ನು ಬಿಟ್ಟು ಬಿಟ್ಟೆ. ಒಮ್ಮೆ ಯೋಚಿಸಿ ನಿಮ್ಮೊಳಗೂ ಕೊಲೆಗಾರನಿದ್ದಾನೆ. ಆ ಕೊಲೆಗಾರ ಒಳಿತಿನ ಕಡೆಗೂ ಕೆಡುಕಿನ ಕಡೆಗೂ ಅನ್ನೋದನ್ನ ನೀವೇ ನಿರ್ಧರಿಸಿ. ಹೆಚ್ಚು ಕೊಲೆಗಾರರಾಗದೇ ಇರೋದಕ್ಕೆ ಪ್ರಯತ್ನಿಸಿ ಹೀಗೊಬ್ಬ ಅನಾಮಿಕ ದಾರಿಯಲ್ಲಿ ಸುಮ್ಮನೇ ಒದರುತ್ತಿದ್ದ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ