ಸ್ಟೇಟಸ್ ಕತೆಗಳು (ಭಾಗ ೧೧೬೪)- ಪ್ರೇಯಸಿ
ಅವನಿಗೆ ಪ್ರೇಯಸಿ ಬೇಕಾಗಿದೆ. ಅದಕ್ಕಾಗಿ ವಿವಿಧ ರೀತಿಯ ಹುಡುಕಾಟವು ಆರಂಭ ಆಗಿದೆ. ಆ ಮನೆಗೆ ಆತ ಬಂದದ್ದು ಆಕಸ್ಮಿಕವಾಗಿ. ತಿನ್ನೋದಕ್ಕೆ ಓಡಾಡೋದಕ್ಕೆ ಅಲ್ಲೇನು ಸಮಸ್ಯೆ ಇಲ್ಲ. ಅದ್ಭುತವಾದ ಬದುಕು ಅವನದು. ಆದರೆ ದಿನ ಕಳೆದಂತೆ ಏಕಾಂಗಿಯಾಗಿದ್ದವನಿಗೆ ಜೊತೆಗಾರ್ತಿ ಒಬ್ಬಳು ಬೇಕು ಅಂತ ಅನ್ನಿಸೋದಿಕ್ಕೆ ಆರಂಭವಾಯಿತು. ಆ ಮನೆಯಲ್ಲಿ ಯಾರೂ ಸಿಗದಿದ್ದ ಕಾರಣ ಸುತ್ತಮುತ್ತ ನೋಡುವುದಕ್ಕ ಆರಂಭ ಮಾಡಿದ. ಎಷ್ಟು ಹುಡುಕಿದರೂ ತನಗೆ ಒಪ್ಪಿಗೆಯಾಗುವವರು ಯಾರು ಕಾಣಲೇ ಇಲ್ಲ. ಮಿಯಾಂವ್ ಎನ್ನುತ್ತಾ ಪ್ರೀತಿಯಿಂದ ಪ್ರೇಯಸಿಯರನ್ನ ಬಳಿಗೆ ಕರೆದರೂ ಕೂಡ ಯಾರು ಇವನ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲ. ಆಗಾಗ ಮನೆ ಬಿಟ್ಟು ಹೋಗಿ ಹುಡುಕಿ ಬರ್ತಾನೆ .ಎಲ್ಲಾದರೂ ಪ್ರೇಯಸಿ ಸಿಗಬಹುದೇನೋ ಅಂತ. ಇವತ್ತಿನವರೆಗೂ ಆತನಿಗೆ ಪ್ರೇಯಸಿ ಸಿಕ್ಕಿಲ್ಲ. ಅವನಿಗೆ ಜಾತಿಯ ಸಮಸ್ಯೆ ಇಲ್ಲ, ಧರ್ಮದ ತಡೆಗೋಡೆ ಇಲ್ಲ. ಪ್ರೀತಿಗೆ ಜೊತೆಗಾರ್ತಿ ಬೇಕಾಗಿದೆ. ಎಷ್ಟು ಹುಡುಕಿದರೂ ಪ್ರೇಯಸಿ ಸಿಗದೇ ಇದ್ದಾಗ ಹೊಟ್ಟೆ ತುಂಬ ತಿಂತಾನೆ. ಮತ್ತೆ ಮಲಗಿಕೊಳ್ಳುತ್ತಾನೆ ಆಗಾಗ ಸುತ್ತ ಗಮನಿಸುತ್ತಾನೆ ದೇವರ ಬಳಿಯೂ ನಿಂತು ಪ್ರಾರ್ಥಿಸುತ್ತಾನೆ. ಭಗವಂತ ನನಗೆ ಒಬ್ಬಳು ಪ್ರೇಯಸಿಯನ್ನ ಸೃಷ್ಟಿಸಿರಬಹುದಲ್ಲವೇ. ಆತ ಕಾಯುತ್ತಿದ್ದಾನೆ ನಿಮಗೆಲ್ಲಾದರೂ ಪ್ರೇಯಸಿಯ ಪರಿಚಯವಿದ್ದರೆ ತಿಳಿಸಿಕೊಡಿ ನಮ್ಮ ಬೆಕ್ಕು ಮಹಾರಾಜನಿಗೆ ಒಬ್ಬಳು ಪ್ರೇಯಸಿ ಬೇಕಾಗಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ