ಸ್ಟೇಟಸ್ ಕತೆಗಳು (ಭಾಗ ೧೧೭೦) - ವಿಚ್ಚೇದನ

ಸ್ಟೇಟಸ್ ಕತೆಗಳು (ಭಾಗ ೧೧೭೦) - ವಿಚ್ಚೇದನ

ಅವನು ಹೇಗೆ ಸೆಳೆದುಕೊಂಡನೋ ಗೊತ್ತಿಲ್ಲ. ಆತ ನನ್ನನ್ನ ಅವನ ವಶ ಮಾಡಿಕೊಂಡದ್ದು ನನಗೆ ತಿಳಿಯಲೇ ಇಲ್ಲ. ಒಂದಷ್ಟು ಸಮಯ ಕೈಯಲ್ಲಿ ಪುಸ್ತಕಗಳು ಓಡಾಡ್ತಾ ಇದ್ದು ಅಕ್ಷರಗಳು ನನ್ನೊಂದಿಗೆ ಮಾತನಾಡುತ್ತಿದ್ದವು. ಹೊಸ ವಿಚಾರಗಳ ಅರಿವು ನನ್ನ ಯೋಚನೆಗಳ ಪರಿಧಿಯನ್ನು ಮೀರಿ ಅದ್ಭುತವಾಗಿ ಬದುಕುತ್ತಿತ್ತು. ಆದರೆ ಅವನು ಸಣ್ಣ ಚೌಕಟ್ಟಿನ ಒಳಗೆ ಬೆಳಕಿನ ಕಿರಣಗಳನ್ನು ಮುಖಕ್ಕೆ ಸಿಂಪಡಿಸಿ ನನ್ನನ್ನು ಅವನೊಳಗೆ ಎಳೆದುಕೊಂಡು ಅಲ್ಲೇ ಸ್ಥಾಪಿಸಿ ಬಿಟ್ಟಿದ್ದಾನೆ. ಹೊಸತೇನನ್ನು ಯೋಚಿಸದ ಹಾಗೆ ಅವನು ಹೇಳಿದಂತೆ ನಾನು ಬದುಕುವ ಹಾಗೆ ಮಾಡಿಬಿಟ್ಟಿದ್ದಾನೆ. ಅವನನ್ನೊಂದು ಸಲ ಕೈಯಲ್ಲಿ ಹಿಡಿದುಕೊಂಡು ಬಿಟ್ಟರೆ ಮತ್ತೆ ದೂರ ಸರಿಸುವುದಕ್ಕೆ ಮನಸೇ ಬರುವುದಿಲ್ಲ. ಅಷ್ಟು ಆವರಿಸಿ ಬಿಟ್ಟಿದ್ದಾನೆ. ಸಂಬಂಧಗಳನ್ನು ದೂರ ಸರಿಸಿ ಗಡಿಯಾರವನ್ನು ತಿಂದು ಹಾಕಿ ಆತನ ಜೊತೆ ಸಮಯ ಕಳೆಯುವಂತೆ ಮಾಡಿಬಿಟ್ಟಿದ್ದಾನೆ. ಅವನಿಲ್ಲದೆ ಬದುಕಿಲ್ಲ ಅನ್ನುವಂತಾಗಿದೆ. ನೀವಾದರೂ ದಾರಿ ತೋರಿಸಿ ನಮ್ಮಿಬ್ಬರನ್ನು ಬೇರ್ಪಡಿಸಿ ಅವನ ಜಾಗಕ್ಕೆ ಇನ್ನೊಂದಷ್ಟು ಹೊಸ ವಿಚಾರಗಳು ಆವರಿಸಿಕೊಳ್ಳುವ ಹಾಗೆ ಮಾಡಿ ನನಗೂ ನನ್ನ ಮೊಬೈಲಿಗೆ ವಿಚ್ಚೇದನ ಕೊಡಿಸಿ ಬಿಡಿ ದಮ್ಮಯ್ಯ ! 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ