ಸ್ಟೇಟಸ್ ಕತೆಗಳು (ಭಾಗ ೧೧೭೩) - ಭ್ರಮೆ

ಸ್ಟೇಟಸ್ ಕತೆಗಳು (ಭಾಗ ೧೧೭೩) - ಭ್ರಮೆ

ಏ ತಳ್ಬೇಡ್ರಿ ಸ್ವಲ್ಪ ಸರಿಯಾಗಿ ನಿಂತ್ಕೊಳ್ಳಿ, ನಾನು ಇವತ್ತು ಬಸ್ಸಲ್ಲಿ ಬಂದಿರೋದು ಇಲ್ಲಾ ಅಂತಂದ್ರೆ ನಾನು ಬಸ್ಸಲ್ಲಿ ಪ್ರಯಾಣಿಸುವವಳೇ ಅಲ್ಲ. ಇಂಥ ಬಸ್ಸುಗಳಲ್ಲಿ ಓಡಾಡದೆ ವರ್ಷ 40 ದಾಟಿದೆ. ಮಗಂದು ಕಾರಿದೆ ಅದೇ ಕಾರಲ್ಲಿ ಎಲ್ಲಾ ಕಡೆಗೂ ಓಡಾಡುತ್ತಾನೆ, ಇವತ್ತು ಮಗ ಯಾವುದೋ ಒಂದು ಕೆಲಸದಲ್ಲಿದ್ದ ಹಾಗಾಗಿ ಬಸ್ ನಲ್ಲಿ ಪ್ರಯಾಣ ಅನಿವಾರ್ಯ.  ಕಾರು ಇಲ್ಲದಿದ್ದರೆ ಮನೆಯಿಂದ ಹೊರಗೆ ಬರೋದಿಲ್ಲ ಕಾರಲ್ಲಿ ಓಡಾಡ್ತಾ ಇದ್ರೆ ಯಾವುದಕ್ಕೂ ಯೋಚನೆ ಮಾಡಬೇಕಾಗಿಲ್ಲ ನೆಮ್ಮದಿಯಾಗಿರಬಹುದು. ನನ್ನ ಮಗ ನನ್ನನ್ನ ಯಾವತ್ತೂ ಹೀಗೆ ಓಡಾಡೋಕೆ ಬಿಟ್ಟವನಲ್ಲ ಇವತ್ತು ಏನು ಆತ ಸ್ವಲ್ಪ ಕೆಲಸದಲ್ಲಿದ್ದ ಕಾರಣ ಈ ಬಸ್ಸಿನಲ್ಲಿ ಬರೋ ಹಂಗಾಯಿತು. ನನ್ನ ಕರ್ಮ. ಹೀಗಂದವರು ಹುಬ್ಬಳ್ಳಿಯಲ್ಲಿ ಹತ್ತಿ ಟೋಲ್ ನಾಕದಲ್ಲಿ ಇಳಿದುಬಿಟ್ರು . ಆಗ ಅವರ ಪಕ್ಕದಲ್ಲಿ ಕೂತಿದ್ದ ಅಜ್ಜಿ ಒಬ್ರು ನನ್ನನ್ನು ನೋಡಿ ನಕ್ಕು ಮಗ ಇವಳು ಪ್ರತಿದಿನ  ಎಲ್ಲರ ಬಳಿ ಇದನ್ನೇ ಹೇಳುತ್ತಾಳೆ. ತಮ್ಮ ಇಡೀ ಜೀವನ ಇದೇ ಬಸ್ನಲ್ಲಿ ಪ್ರಯಾಣವನ್ನು ಮಾಡುತ್ತಾನೆ ಇದ್ದಾಳೆ. ಆ ಮಗನೋ ಇವರನ್ನ ನೋಡುವುದಕ್ಕೂ ಬರುವುದಿಲ್ಲ ಇವರ ಬಗ್ಗೆ ಗಮನನೇ ಕೊಡೋದಿಲ್ಲ.  ಇವರು ಎಲ್ಲರ ಮುಂದೆ ಭ್ರಮೆಗಳ ಕತೆಯನ್ನು ಕಟ್ಟಿ, ಮಾತನಾಡ್ತಾನೆ ಇರ್ತಾರೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ