ಸ್ಟೇಟಸ್ ಕತೆಗಳು (ಭಾಗ ೧೧೭೪) - ಆದರ್ಶ

ಸ್ಟೇಟಸ್ ಕತೆಗಳು (ಭಾಗ ೧೧೭೪) - ಆದರ್ಶ

ಆದರ್ಶಗಳು ದಾರಿಯಲ್ಲಿ ಕಾಯುತ್ತಿವೆ. ಒಂಚೂರು ನಿರ್ಲಿಪ್ತವಾಗಿ, ಯಾವುದೇ ಪ್ರತಿಪಲಾಕ್ಷೆ ಇಲ್ಲದೆ ಯಾರ ಜೊತೆಗಾದರೂ ಹೊರಟು ಹೋಗಲು ಕಾಯುತ್ತಿವೆ. ಅವುಗಳಿಗೆ ಒಂದಿನಿತೂ ಶಕ್ತಿಯಿಲ್ಲ. ಬರಿಯ ಅಸ್ಥಿ ಪಂಜರವಾಗಿ ರಕ್ತ ಮಾಂಸಗಳಿಗೆ ಕಾಯುತ್ತಿವೆ. ನಮ್ಮ ಕೆಲಸ ಕೈಹಿಡಿದು ಆದರ್ಶಗಳನ್ನ ಜೊತೆಗೆ ಕರೆದೊಯ್ಯುವುದು. ನಾವಿಲ್ಲವಾದರೆ ಆದರ್ಶಗಳು ವ್ಯರ್ಥವಾಗಿ ಉಳಿದು ಬಿಡುತ್ತವೆ. ಅವುಗಳು ಶತಮಾನದಿಂದ ಕಾಯುತ್ತಿವೆ. ಕೆಲವರು ಆರಿಸಿಕೊಂಡರು ಕೆಲವರು ತೊರೆದು ಹೊರಟರು. ಹಾಗೆ ತೊರೆದು ಹೊರಟವರನ್ನ ಆದರ್ಶಗಳು ಕರೆದರೂ ಯಾರಿಗೂ ಕಿವಿ ಕೇಳುತ್ತಿಲ್ಲ. 

ಹಾಗೆ ದಾರಿಯಲ್ಲಿ ಸಾಗುವಾಗ ಸರಿಯಾಗಿ ನೋಡಿ ಆದರ್ಶಗಳು ನಿಮಗೂ ಸಿಗಬಹುದು. ಆರಿಸಿ ಜೋಳಿಗೆ ತುಂಬಿಸಿಕೊಳ್ಳಿ. ಜೊಳಿಗೆ ತುಂಬಿದಷ್ಟು ತುಂಬಾ ದೂರದವರೆಗೆ ನೆಮ್ಮದಿಯಿಂದ ಸಾಗಬಹುದು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ