ಸ್ಟೇಟಸ್ ಕತೆಗಳು (ಭಾಗ ೧೧೭೫) - ಒಂಟಿ

ಊರಲ್ಲೊಂದು ಜಾಗನೋಡಿ ಮನೆ ಕಟ್ಟಿಯಾಗಿದೆ. ತುಂಬಾ ವಿಶಾಲವಾದ ಇಡೀ ಊರಿನಲ್ಲೂ ವಿಭಿನ್ನವಾದ ಮನೆಯೊಂದನ್ನ ಕಟ್ಟಿಯಾಗಿದೆ. ಮನೆಯ ಮಗನ ಆಸೆಯಂತೆ ಅಪ್ಪ ಅಮ್ಮನ ನೆಮ್ಮದಿಯ ಜೀವನಕ್ಕೆ ಬೇಕೆಂದು ಮನೆಯನ್ನ ಕಟ್ಟಿದ್ದಾರೆ. ಮನೆಯ ಮಗನಿಗೆ ಕೆಲಸ ಬೆಂಗಳೂರಿನ ಶಹರದಲ್ಲಿ. ಮದುವೆಯೂ ಅಲ್ಲಿಯೇ ಹುಟ್ಟಿದ ಮಗನೂ ಕೂಡಾ. ಆಗಾಗ ಕುಟುಂಬ ಸಮೇತ ಊರಿಗೆ ಬಂದು ಅಪ್ಪ ಅಮ್ಮನ ಜೊತೆ ಇದ್ದು ಮತ್ತೆ ಹೊರಡುತ್ತಾರೆ. ಕಾಲನ ಕರೆಗೆ ಅಪ್ಪ ಹೊರಟು ಹೋದಾಗ ಅಮ್ಮ ಒಂಟಿಯಾದರು. ಮನೆಯನ್ನ ಮತ್ತೆ ಇನ್ನಷ್ಟು ಸುಂದರಗೊಳಿಸಿದರು. ಮಗಸೊಸೆ ಶಹರಕ್ಕೆ ಮನೆಯಲ್ಲಿ ಉಳಿದರು ಅಮ್ಮ. ದೊಡ್ಡ ಮನೆಯನ್ನ ಕಣ್ಣೆತ್ತಿ ನೋಡುತ್ತಾ ಇಡೀ ಮನೆ ಓಡಾಡುತ್ತಾ ಸಂಜೆಯಾದಾಗ ಮನೆಯ ಹೊರಗಡೆ ಕುರ್ಚಿ ಮೇಲೆ ಕುಳಿತು ಊರು ನೋಡುತ್ತಾ ಸಂಭ್ರಮವಿಲ್ಲದ ಬದುಕನ್ನ ಸಾಗಿಸುತ್ತಿದ್ದಾರೆ.ನೋಡುಗರ ಕಣ್ಣಿಗೆ ಶ್ರೀಮಂತಿಕೆಯ ಸಂಭ್ರಮ, ಆದರೆ ತಾಯ ಹೃದಯ ಮಾತ್ರ ಒಳಗಳುತ್ತಿದೆ. ಒಂಟಿ ತನದ ಬೋಳು ಮರ ನೀರಿಲ್ಲದ ಮೈದಾನದಲ್ಲಿ ನಿಂತಂತೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ