ಸ್ಟೇಟಸ್ ಕತೆಗಳು (ಭಾಗ ೧೧೮೦) - ವಾದ

ಅವತ್ತು ಜಗಳ ಜೋರಾಗಿತ್ತು. ಇಬ್ಬರ ವಾದ ವಿವಾದವನ್ನ ಕೇಳಿದ ನ್ಯಾಯಾದೀಶರಿಗೆ ಯಾವ ಕಡೆ ತೀರ್ಪು ನೀಡುವುದೇ ತಿಳಿಯಲಿಲ್ಲ. ಇಬ್ಬರೂ ಜೊತೆಗೆ ಇದ್ದವರು ಒಬ್ಬರಿಗೊಬ್ಬರು ಆಧಾರವಾಗಿದ್ದವರು. ಆದರೂ ವಾದ ಜೋರಾಗಿತ್ತು. ದೇಹ ಮನಸಿನಲ್ಲಿ ಕೇಳಿಕೊಳ್ಳುವುದಿಷ್ಟೆ. ನೀನು ನನ್ನ ವಯಸ್ಸಿನವನಾಗಿಯೇ ಇದ್ದು ಬಿಡು ಮಾರಾಯಾ. ಸಣ್ಣವನಿರುವಾಗ ದೊಡ್ಡವನಾಗಬೇಕು ಅಂತಿಯಾ, ದೊಡ್ಡವನಾದ ಮೇಲೆ ಮರಳಿ ಬಾಲ್ಯ ಬೇಕು ಅಂತೀಯಾ. ಯಾಕೆ ಇದ್ದದ್ದನ್ನ ಅನುಭವಿಸುವುದಕ್ಕೇನು ದಾಡಿ.
ನೀನು ಹೇಳೋದು ಸರಿ ಮಾರಾಯಾ ಆದರೆ ಹಾಗೆ ಇದ್ದು ಬಿಟ್ರೆ ಬದುಕು ಚೆನ್ನಾಗಿರೋದಿಲ್ಲ. ಆಗಾಗ ಮನಸ್ಸಿನ ವಯಸ್ಸು ಬದಲಾಯಿಸಬೇಕು. ಇಲ್ಲದಿದ್ದರೆ ದೇಹಕ್ಕೆ ರೋಗ ಹಿಡಿಯುತ್ತದೆ. ದೇಹದ ಬಾಳ್ವಿಕೆ ಹೆಚ್ಚಾಗಬೇಕಾಗಿದರೆ ಮನಸ್ಸಿನ ವಯಸ್ಸು ಕಡಿಮೆಯಾಗಬೇಕು. ನಾನೇನೋ ನನ್ನಲ್ಲಿ ಅಂದುಕೊಳ್ಳುತ್ತೇನೆ, ಆದರೆ ನೀನು ಯಾಕೆ ಸಹಕರಿಸೋದಿಲ್ಲ. ಅದರಿಂದ ಆಗುವ ಉಪಯೋಗ ನಿನಗೆ ಬೇಡ ಅಲ್ವಾ?
ನಿನಗೆ ತಲೆ ಸರಿ ಇಲ್ಲ. ದೊಡ್ಡವನು ಸಣ್ಣವನಾಗಬೇಕು. ಸಣ್ಣವ ದೊಡ್ಡವನಾಗಬೇಕು. ಇದ್ಯಾವ ಭ್ರಮೆ, ನಾನು ನಿನ್ನ ಹಾಗೆ ಹುಚ್ಚನಾಗುವುದಿಲ್ಲ. ಒಂದು ದೇಹದ ವಾದ, ಹುಚ್ಚ ನಾನಲ್ಲ ನೀನು ವರ್ತಮಾನ ಅರ್ಥ ಮಾಡಿಕೊಳ್ಳದೇ ಬದುಕುವವನು ಇದು ಮನಸ್ಸಿನ ಪ್ರತಿವಾದ. ಮುಗಿಯುತ್ತಿಲ್ಲ ಚರ್ಚೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ