ಸ್ಟೇಟಸ್ ಕತೆಗಳು (ಭಾಗ ೧೧೮೨) - ಉಡುಗೊರೆ

ಸ್ಟೇಟಸ್ ಕತೆಗಳು (ಭಾಗ ೧೧೮೨) - ಉಡುಗೊರೆ

ಎಲ್ಲರ ಮುಖದಲ್ಲಿ ಕಾಯುವಿಕೆಯ ನೆರಳು ಕಾಣುತ್ತಿತ್ತು. ಕೆಲವರಲ್ಲಿ ಅದು ಸಂಭ್ರಮದಿಂದ ಸರಿದು ಮಾಯವಾದರೆ, ಕೆಲವರಿಗೆ ನಿರಾಶೆಯ ಮೋಡ ಕವಿದು ಕಾಯುವಿಕೆ ಬೇಸರಿಸಿಕೊಳ್ಳುತ್ತಾ ಹೋಯಿತು. ಪುಟ್ಟ ಕಾರ್ಯಕ್ರಮದ ಆಯೋಜನೆ ಗುರುತಿಲ್ಲದ ವ್ಯಕ್ತಿಯಿಂದ ಉಡುಗೊರೆಯೊಂದು ದಾಟ ಬೇಕಾಗಿತ್ತು. ಕೆಲವರು ಯೋಚಿಸಿ ಉಡುಗೊರೆ ಪಡೆದುಕೊಳ್ಳುವವನ ಮನಸ್ಸಿಗೆ ಇಷ್ಟವಾಗುವ ತರಹದ ಪಟ್ಟಿಗಳನ್ನ ತಯಾರು ಮಾಡಿ ಉಡುಗೊರೆಗಳನ್ನ ನೀಡಿದರು. ಇನ್ನೂ ಕೆಲವರಿಗೆ ಕೊಡುವುದಕ್ಕೆ ಅದೇನೋ ಬೇಸರ ಹಾಗಾಗಿ ಕಾಟಾಚಾರಕ್ಕೆ ತಂದು ಉಡುಗೊರೆಗಳನ್ನು ಹಂಚಿದರು. ಇಲ್ಲಿ ಪಡೆದುಕೊಂಡವರ ನೋವಿನ ಭಾವ ಅರ್ಥವಾಗುವುದು ಯಾರಿಗೆ? ಉಡುಗೊರೆಗಳು ಕೊಡುವವನಿಗಿಂತ ಹೆಚ್ಚಾಗಿ ಪಡೆದುಕೊಳ್ಳುವವನ ಮುಖದಲ್ಲಿ ನೆಮ್ಮದಿ ಸಂತೋಷವನ್ನು ಉಂಟುಮಾಡುವಂತಿರಬೇಕು. ಆದರೆ ಆ ಕೋಣೆಯಿಂದ ಹೊರಟು ಹೋದ ಕೆಲವರ ಮುಖದಲ್ಲಿ ಸಂತೋಷ ನೆಮ್ಮದಿ ಕಾಣಲೇ ಇಲ್ಲ. ವ್ಯರ್ಥವಾಗಿ ಕೈಗೆ ದಾಟಿದ ಉಡುಗೊರೆಗಳು ತಮ್ಮ ಅರ್ಥವನ್ನೇ ಕಳೆದುಕೊಂಡು ಮೌನಕ್ಕೆ ಜಾರಿದವು‌ ಕೊಟ್ಟವನಿಗೆ ದಾಟಿಸಿದ ನೆಮ್ಮದಿ, ಪಡೆದುಕೊಂಡವನಿಗೆ ಸಿಗದಿರುವ ವ್ಯಥೆ ,ಉಡುಗೊರೆಗೆ ತನ್ನ ಅರ್ಥ ವ್ಯಾಪಿಸದ ನೋವು, ಒಟ್ಟಿನಲ್ಲಿ ಉಡುಗೊರೆಯೂ ಕೂಡ ನೋವು ಕೊಡುವುದಂತೆ ಅನ್ನೋದು ಅರ್ಥವಾದದ್ದು ಅವತ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ