ಸ್ಟೇಟಸ್ ಕತೆಗಳು (ಭಾಗ ೧೧೮೫) - ಅರ್ಥವಾಗಲೇ ಇಲ್ಲ

ಸ್ಟೇಟಸ್ ಕತೆಗಳು (ಭಾಗ ೧೧೮೫) - ಅರ್ಥವಾಗಲೇ ಇಲ್ಲ

ಅವನನ್ನ ಕಂಡರೆ ಎಲ್ಲರಿಗೂ ಗೌರವ, ಆತನಿಗೆ ಎಲ್ಲವೂ ಅರ್ಥವಾಗುತ್ತದೆ ಮನುಷ್ಯರಿಗಿಂತ ಹೆಚ್ಚಾಗಿ ಆತ ಪ್ರಾಣಿಗಳ ಪ್ರಪಂಚದಲ್ಲಿ ಮುಳುಗಿದ್ದ. ಆತನ ಮನೆಯ ನಾಯಿಗೆ ಯಾವ ಕ್ಷಣದಲ್ಲಿ ಏನು ಬೇಕು ಅದರ ಭಾವನೆಯನ್ನು ಅಚ್ಚುಕಟ್ಟಾಗಿ ಅರ್ಥ ಮಾಡಿಕೊಂಡು ಅದಕ್ಕೆ ಬೇಕಾದ ವ್ಯವಸ್ಥೆ ಮಾಡುವವ. ಒಂದು ಕ್ಷಣ ಬೇಸರದಿಂದ ಕಂಡುಬರುವ ಬೆಕ್ಕನ್ನು ಉಪಚರಿಸಿ ಮತ್ತದಕ್ಕೆ ಚೈತನ್ಯ ನೀಡುವ ಮನೆಯ ಸುತ್ತಮುತ್ತ ಬರುವ ಪ್ರಾಣಿ ಪಕ್ಷಿಗಳಾದರೆ ಅವುಗಳ ಅಗತ್ಯಗಳನ್ನು ಪೂರೈಸಿ ಹೆಚ್ಚು ಆತ್ಮೀಯತೆಯನ್ನು ಬೆಳೆಸಿಕೊಳ್ಳುವವ. ಹೀಗೆ ಎಲ್ಲರ ಜೊತೆಗೆ ಆತ್ಮೀಯ ಸಂಬಂಧಗಳನ್ನು ಬೆಳೆಸಿಕೊಂಡವ ಓದು ಮುಗಿಸಿ ಹೊರದೇಶಕ್ಕೆ ಹೊರಡುವಾಗ ಮನೆಯ ತಂದೆ ತಾಯಿಯ ನೋವು ಅರ್ಥ ಮಾಡಿಕೊಳ್ಳದೆ ಬರಿಯ ಸಾಧನೆಗೆ ಮುಖ ತಿರುಗಿಸಿ ಹೊರಟುಬಿಟ್ಟಿದ್ದ. ಮೂಕ ಪ್ರಾಣಿಗಳ ಭಾವನೆಯನ್ನು ಅರ್ಥೈಸಿಕೊಂಡವನಿಗೆ ಬದುಕು ನೀಡಿದವರ ಭಾವನೆಗಳು ಕಾಣಲೇ ಇಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ