ಸ್ಟೇಟಸ್ ಕತೆಗಳು (ಭಾಗ ೧೧೮೬) - ಬೆಕ್ಕು ಪಾಠ

ಸ್ಟೇಟಸ್ ಕತೆಗಳು (ಭಾಗ ೧೧೮೬) - ಬೆಕ್ಕು ಪಾಠ

ಮನೆಗೊಂದು ಬೆಕ್ಕು ಬಂದಿದೆ, ಅದನ್ನ ಸಾಕುವುದಕ್ಕು ಆರಂಭ ಮಾಡಿದ್ದೇವೆ. ಇಷ್ಟರವರೆಗೆ ಮನೆಯಲ್ಲಿದ್ದ ಮಾಮೂಲಿ ಬೆಕ್ಕುಗಳನ್ನು ನೋಡಿ ಅಭ್ಯಾಸವಿದ್ದ ನನಗೆ ಈ ದೊಡ್ಡ ದುಡ್ಡಿನ ಬೆಕ್ಕಿನ‌ ಬದುಕಿನ ರೀತಿ ತಿಳಿದಿಲ್ಲ. ನಾವು ಅದಕ್ಕೆ ಒಗ್ಗಿಕೊಳ್ಳಬೇಕು ಇಲ್ಲವಾದರೆ ಬೆಕ್ಕು ನಮಗೆ ಒಪ್ಪಿಕೊಳ್ಳುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಇತ್ತೀಚಿಗೆ ನಮ್ಮ ದಿನಚರಿಯನ್ನು ಅದಕ್ಕೆ ಒಗ್ಗಿಸುವ ಅಭ್ಯಾಸ ಮಾಡಿದ್ದೇನೆ ಅದು ಒಪ್ಪಿಕೊಂಡು ಮುನ್ನಡೆದಿದೆ. ಪ್ರತಿದಿನ ಅದಕ್ಕೆ ಊಟವನ್ನು ಹಾಕುವಾಗ ಫ್ರಿಡ್ಜ್ ನೊಳಗಿನಿಂದ ಮೊಸರು ನೀನು ಹಾಲು ಮೊಟ್ಟೆ ಯಾವುದನ್ನಾದರೂ ನೀಡಲೇಬೇಕು ಇಲ್ಲವಾದರೆ ಅದರ ಹೊಟ್ಟೆಗೆ ಆಹಾರ ಹಿಡಿಯುವುದಿಲ್ಲ. ನೀವು ಅದೇ ಆಹಾರವನ್ನ ಅಡುಗೆ ಕೋಣೆಯಿಂದ ತಂದ್ರೆ ಬೆಕ್ಕು ಊಟವನ್ನು ಮುಟ್ಟುವುದಿಲ್ಲ. ಇತ್ತೀಚಿಗೆ ಕೆಲವು ದಿನಗಳಿಂದ ವಿಶೇಷವಾದ ಯಾವುದೇ ಆಹಾರ ನೀಡದೆ ಹಾಲು ಮತ್ತು ಮೊಸರನ್ನ ಮಾತ್ರ ನೀಡುತ್ತಿದ್ದೇವೆ. ಪ್ರತಿದಿನ ಆಹಾರ ನೀಡುವಾಗ ಫ್ರಿಡ್ಜ್ ಬಾಗಿಲನ್ನ ತೆಗೆದು ಆಹಾರ ಹಾಕ್ತೇವೆ ಅಷ್ಟೆ. ಬೆಕ್ಕು ಆರೋಗ್ಯವಾಗಿದೆ ಪ್ರೀತಿ ಹಾಗೆ ಇದೆ ಚೆನ್ನಾಗಿ ಊಟವನ್ನು ಮಾಡುತ್ತದೆ. ಅಲ್ಲ ಕೆಲವೊಂದು ವಿಚಾರಗಳಿಗೆ ಮನಸ್ಸು ಒಗ್ಗಿಕೊಂಡಾಗ ನಮಗಲ್ಲಿ ನಿಜವಾದ ಸತ್ವ ಇದೆಯೋ ಇಲ್ಲವೋ ಅನ್ನೋದನ್ನ ನೋಡದೆ ಅದನ್ನ ನಾವು ಒಪ್ಪಿಕೊಂಡು ಮುನ್ನಡೆಯುತ್ತೇವೆ. ಮನಸ್ಸು ಒಪ್ಪಿಕೊಂಡರೆ ಎಲ್ಲವನ್ನು ಮಾಡುವುದಕ್ಕೆ ಸಾಧ್ಯವಿದೆ, ಅದಕ್ಕೆ ದೊಡ್ಡವರು ಹೇಳಿದ್ದು ಮನಸ್ಸಿದ್ದರೆ ಹೊಟ್ಟೆಯೊಳಗೆ ಕಲ್ಲು ಕರಗುತ್ತದೆ ಅಂತ. ನಾನು ಮನಸ್ಸು ಮಾಡಿದರೆ ಹೊಸತೇನೋ ಮಾಡೋದಕ್ಕೆ ಸಾಧ್ಯ ಇದೆ ಅಲ್ವಾ? ಇವತ್ತು ಬೆಕ್ಕು ನನಗೆ ಪಾಠ ಮಾಡುವ ಹಾಗಾಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ