ಸ್ಟೇಟಸ್ ಕತೆಗಳು (ಭಾಗ ೧೧೮೭) - ಸರಿಯಾ?
ಕಣ್ಣೀರಿನೊಂದಿಗೆ ಬಣ್ಣಗಳು ಕೆಳಗಿಳಿಯುತ್ತಿವೆ. ಹಲವು ತಿಂಗಳುಗಳ ಪರಿಶ್ರಮ ಅಭ್ಯಾಸ ಪಟ್ಟ ಹಾಡು, ನೃತ್ಯವನ್ನು ವೇದಿಕೆಯ ಮೇಲೆ ಪ್ರದರ್ಶಿಸಬೇಕೆನ್ನುವ ಹುಮ್ಮಸ್ಸು, ಬಣ್ಣ ಬಣ್ಣದ ಉಡುಗೆ ತೊಟ್ಟು ಸಂಭ್ರಮದ ಹಾಡುಗಳಿಗೆ ನೃತ್ಯ ಹಾಕುವ ಅದ್ಭುತ ಕ್ಷಣಕ್ಕೆ ಆ ಮಕ್ಕಳು ಎದುರು ನೋಡುತ್ತಿದ್ದಾರೆ. ಜೊತೆಗೆ ಹೆತ್ತವರು ಕಾತರದಿಂದ ಕಾಯುತ್ತಿದ್ದಾರೆ ವರ್ಷಕ್ಕೊಂದು ಸಲ ಮಗು ಸಂಭ್ರಮದಿಂದ ವೇದಿಕೆ ಮೇಲೆ ಏರಿ ತನ್ನ ಪ್ರತಿಭೆಯನ್ನ ಪ್ರದರ್ಶಿಸುವ ಘಳಿಗೆ. ಎಲ್ಲವೂ ಸರಿಯಾಗಿದೆ ಅಂದುಕೊಳ್ಳುವಷ್ಟರಲ್ಲಿ ಸರಕಾರದ ಆದೇಶವು ಬಂದೇಬಿಡ್ತು. ಹಿರಿಯರೊಬ್ಬರ ಸಾವಿನಿಂದ ಸಂಭ್ರಮಗಳು ನಡೆಯುವ ಹಾಗಿಲ್ಲ. ಸಂತಾಪಕ್ಕಾಗಿ ಸಂಭ್ರಮವನ್ನ ಸಂಭ್ರಮಿಸುವ ಹಾಗಿಲ್ಲ ಎಂದು ದೊಡ್ಡ ಅಧಿಕಾರಿಗಳು ಬಂದು ಕಾರ್ಯಕ್ರಮವನ್ನು ನಿಲ್ಲಿಸಿಯೇ ಬಿಟ್ಟರು. ಮಕ್ಕಳು ಬೇಡಿಕೊಂಡರು ಅತ್ತರು ಕೇಳಲಿಲ್ಲ. ಪುಟ್ಟ ಮಗುವೊಂದು ನಾನು ಒಂದು ನೃತ್ಯ ಮಾಡಿ ಮನೆಗೆ ತೆರಳುತ್ತೇನೆ ಎಂದು ಬೇಡಿಕೊಂಡರು ಅವರು ಯಾರು ಆ ಮಾತಿಗೆ ಒಪ್ಪುವ ಹಾಗೆ ಇರಲಿಲ್ಲ. ಇದು ಮೇಲಿನಿಂದ ಬಂದ ತೀರ್ಮಾನವಾಗಿತ್ತು. ಮಕ್ಕಳ ನೋವಿನ ಕಣ್ಣೀರು ಮರಣಿಸಿದ ವ್ಯಕ್ತಿಯ ಆತ್ಮಕ್ಕೆ ತಟ್ಟದಿರಬಹುದೇ? ಕಳೆದುಕೊಂಡವರ ನೋವಿರುವುದು ಸಹಜ, ಆ ನೋವನ್ನು ಬೇರೆಯವರಿಗೆ ದಾಟಿಸುವುದಷ್ಟು ಸರಿ? ಉತ್ತರ ಗೊತ್ತಿಲ್ಲ. ಮರಣಿಸಿದವರ ಬದುಕಿನ ದಾರಿಗಳನ್ನ ಮಕ್ಕಳ ಬದುಕಿನೊಳಗೆ ಹಾಸು ಹೊಕ್ಕಾಗುವ ಹಾಗೆ ಮಾಡುವ ಜವಾಬ್ದಾರಿ ತೆಗೆದುಕೊಳ್ಳುವುದು ಒಪ್ಪಿತ್ತ. ಆದರೆ ರಜೆಗಳಿಂದ ಬದಲಾವಣೆಗಳೇನು ಆಗುವುದಿಲ್ಲ ಸರ್, ಹೀಗೆಂದವರು ನಿರ್ಗುಣ ಮೇಷ್ಟ್ರು. ತುಂಬಾ ನೋವಿನಿಂದ ಹೀಗಂದು ಬಸ್ಸನ್ನೇರಿ ಮುಂದಿನ ಊರಿಗೆ ಹೊರಟೆ ಹೋದರು....
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ