ಸ್ಟೇಟಸ್ ಕತೆಗಳು (ಭಾಗ ೧೧೮೮) - ಮೌನದಾಚೆ
ಹುಟ್ಟಿದ್ದು ಜೊತೆಯಾಗಿ, ಬೆಳೆದಿದ್ದು ಜೊತೆಯಾಗಿ, ನಾನು ಶಾಲೆಗೆ ಹೋಗಿದ್ದೆ ಅವಳು ಶಾಲೆಗೆ ಹೋಗಿದ್ದಳು, ಪ್ರತಿದಿನದ ದಿನಚರಿಯಲ್ಲೇನೋ ಬದಲಾವಣೆಯಿರಲಿಲ್ಲ. ಎಲ್ಲವೂ ಒಂದೇ ತೆರನಾಗಿದ್ದವು. ಬದುಕಿನ ಎಲ್ಲಾ ಘಟನೆಗಳು ಇಬ್ಬರ ಜೀವನದಲ್ಲೂ ನಡೆದಿದ್ದವು. ನೋವಾಗಿತ್ತು, ಖುಷಿಯಾಗಿತ್ತು, ಆಶ್ಚರ್ಯವಾಗಿತ್ತು, ಅದ್ಭುತವು ಘಟಿಸಿತ್ತು. ಆದರೆ ಈಗ ಬದುಕುವ ಕ್ಷಣಗಳನ್ನು ನೋಡಿದರೆ ಅವಳಿಗೆ ಮೌನದ ಮಾತುಗಳು ತುಂಬಾ ಚೆನ್ನಾಗಿ ಕೇಳಿಸುತ್ತದೆ. ನನಗೆ ಆ ಮಾತುಗಳು ಇಂದಿನವರೆಗೂ ಹತ್ತಿರವೇ ತಲುಪಿಲ್ಲ. ಗಿಡಗಳಿಗೆ ಯಾವ ಕ್ಷಣ ಎಷ್ಟು ನೀರು ಬೇಕು? ಯಾವ ಗಿಡ ಹೇಗೆ ಹೂ ಬಿಡುತ್ತದೆ? ಮನೆಯಲ್ಲಿ ಓಡಾಡುವ ಪ್ರಾಣಿಗಳಿಗೆ ಯಾವ ಕ್ಷಣದಲ್ಲಿ ಏನು ಬೇಕೆನಿಸುತ್ತದೆ? ಮನೆಯ ಮುಂದಿನ ಅಂಗಳ ಯಾವಾಗ ಸ್ವಚ್ಛತೆಯನ್ನ ಬಯಸುತ್ತೆ? ಅಡುಗೆ ಕೋಣೆಯ ತರಕಾರಿಗಳು ಯಾವ ರೀತಿಯ ರುಚಿಯನ್ನ ಬಯಸುತ್ತವೆ? ಎಲ್ಲಿಂದಲೂ ಯಾವಾಗಲೂ ಹಾರಿ ಬರುವ ಹಕ್ಕಿಗಳು ಯಾವ ಕ್ಷಣದಲ್ಲಿ ಆಹಾರವನ್ನು ಕೇಳುತ್ತವೆ? ದೂರದಲ್ಲಿರುವ ಮನೆಯವರ ಆಲೋಚನೆಗಳೇನು? ಮನೆಯ ಮುಂದೆ ನಿಲ್ಲಿಸಿರುವ ವಾಹನ ಯಾವ ಕ್ಷಣ ಸ್ನಾನ ಬಯಸುತ್ತದೆ ?ಚಪ್ಪಲಿಗಳು ಏನನ್ನ ನಿರೀಕ್ಷಿಸುತ್ತವೆ ?ಇದ್ಯಾವುದು ನನ್ನ ಬಳಿಗೆ ತಲುಪುಲೇ ಇಲ್ಲ ಆಕೆಗೆ ಅದೆಲ್ಲವೂ ಕೇಳಿಸುತ್ತಿದೆ. ಎಲ್ಲವನ್ನು ಕೇಳಿಸಿಕೊಂಡು ಹಾಗೆ ವರ್ತಿಸುತ್ತಾಳೆ. ಹಾಗಾಗಿ ಆಕೆ ಆಶ್ಚರ್ಯದ ಗೂಡಾಗಿದ್ದಾಳೆ, ಅದ್ಭುತದ ರಸ ಗಣಿಯಾಗಿದ್ದಾಳೆ. ನಾನು ಜೊತೆಗೆ ಬದುಕಿದ್ದರೂ ಸಹ ಅದನ್ನು ಅನುಸರಿಸಲಾಗಲಿಲ್ಲ ಅನುಕರಿಸಲಾಗಲಿಲ್ಲ. ಮೌನದ ಮಾತನ್ನು ಕೇಳುವ ವ್ಯಕ್ತಿ ಅದ್ಭುತವನ್ನು ಖಂಡಿತವಾಗಿಯೂ ಸಾಧಿಸುತ್ತಾನೆ. ನನ್ನ ಕಲಿಯುವಿಕೆಯ ಪಟ್ಟಿಯಲ್ಲಿ ಇದು ಕೂಡ ಸೇರಿಕೊಂಡಿದೆ... ಆತ ಮತ್ತೆ ಯೋಚನೆಯೊಳಗೆ ಮುಳುಗಿದ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ