ಸ್ಟೇಟಸ್ ಕತೆಗಳು (ಭಾಗ ೧೧೮೯) - ಸಂದೇಶ

ಸ್ಟೇಟಸ್ ಕತೆಗಳು (ಭಾಗ ೧೧೮೯) - ಸಂದೇಶ

ಎಲ್ಲರ ಹಾಗೆ ಒಂದಷ್ಟು ಸಮಯ ವ್ಯರ್ಥ ಮಾಡಿಕೊಂಡು ಗೆಳೆಯರ ಜೊತೆ ಸೇರಿಕೊಂಡು ಮೋಜು ಮಸ್ತಿಯಲ್ಲಿ ಮುಳುಗಿದ್ದವ. ಅವತ್ತು ಬೆಳಗ್ಗೆ ಬೇಗ ಏಳೋಣ ಅಂತ ಅನ್ನಿಸ್ತು. ಒಂದಷ್ಟು ಸಮಯ ಎದ್ದು ಓಡಾಟ ನಡಿಗೆ ಎಲ್ಲವನ್ನು ಮಾಡಿಕೊಂಡಿದ್ದ. ಯಾರೋ ಒಬ್ಬರು 75 ದಿವಸದ ಚಾಲೆಂಜ್ ಹೇಳಿದ್ದಕ್ಕೆ ಅದನ್ನು ಪೂರ್ತಿ ಗೊಳಿಸಿಯೇ ಬಿಟ್ಟ. ದೇಹ ದಂಡಿಸಿ ಒಂದಷ್ಟು ಶಿಸ್ತು ಕಲಿತಿದ್ದರಿಂದ ಹೊಸತೇನೋ ಮಾಡಬೇಕೆನಿಸಿತು. ಹಾಗಾಗಿ ದೇಹ ದಂಡಿಸುವ ಕೆಲಸಕ್ಕೆ ಮುಂದಡಿ ಇಟ್ಟ. ಜಿಮ್ ಸೇರಿ ದೇಹವನ್ನ ಅಚ್ಚುಕಟ್ಟಾಗಿ ಮಾಡುತ್ತಿದ್ದಾಗ ಇಷ್ಟಕ್ಕೆ ನಿಲ್ಲಿಸುವುದಕ್ಕಿಂತ ಇನ್ನೊಂದಷ್ಟು ಹೆಚ್ಚು ಪರಿಶ್ರಮವನ್ನ ಪಡೋಣ ಅಂತ ಅನ್ನಿಸ್ತು. ಒಂದು ಕ್ಷಣವನ್ನು ವ್ಯರ್ಥ ಮಾಡದೆ ಎಲ್ಲವನ್ನು ವೇಳಾಪಟ್ಟಿಯಲ್ಲಿ ತಂದು ಬದುಕಬೇಕು. ಹಾಗೆ ಬದುಕುವುದರಿಂದ ಏನೋ ಸಾಧನೆಯಾಗುತ್ತೆ ಅನ್ನುವ ಅದ್ಭುತವಾದ ಯೋಚನೆಯೆನೋ ಇರಲಿಲ್ಲ . ಸಾಧ್ಯವಾಗಬಹುದಾ? ಎನ್ನುವ ಪ್ರಶ್ನೆಯಿಂದ ಕೆಲಸ ಆರಂಭವಾಗಿತ್ತು ಹಾಗೆ ದೇಹವನ್ನ ಒಂದು ಚೌಕಟ್ಟಿನೊಳಗೆ ತಂದವನಿಗೆ ದೇಹದಾಢ್ಯ ಸ್ಪರ್ಧೆಯ ವಿಚಾರ ಗೊತ್ತಾಯಿತು ಹಗಲು ರಾತ್ರಿ ಕಷ್ಟಪಟ್ಟ ಆಹಾರದಲ್ಲಿ ನೀರಿನಲ್ಲಿ ನಿದ್ರೆಯಲ್ಲಿ ಎಲ್ಲದರಲ್ಲೂ ಒಳಿತನ್ನು ಪಡೆದುಕೊಂಡು ಕೆಡುಕನ್ನ  ದೂರವಿಟ್ಟು ಸಮಯದ ಪರಿಪಾಲನೆಯಿಂದ ಶಿಸ್ತು ಮೈ ಕೂಡಿಸಿಕೊಂಡ. ಮೊದಲ ಸ್ಪರ್ಧೆಯಲ್ಲಿ ವೇದಿಕೆಯಲ್ಲಿ ಮಾಡಿದ ಸಣ್ಣ ತಪ್ಪಿನಿಂದ ಬೆಳ್ಳಿಗೆ ತೃಪ್ತಿ ಪಟ್ಟ, ಆದರೆ ಛಲ ಬಿಡಲಿಲ್ಲ ತಪ್ಪನ್ನ ಸರಿಪಡಿಸಿಕೊಂಡು ಮತ್ತೆ ಇನ್ನಷ್ಟು ಕಠಿಣ ಪರಿಶ್ರಮದಿಂದ ಚಿನ್ನವನ್ನ ಕೊರಳಿಗೇರಿಸಿಕೊಂಡು ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಕ್ಕೆ ಆಯ್ಕೆಯಾದ. ಇಷ್ಟು ದಿನ ಅವನೂ ರಾಜ್ಯವನ್ನ ಪ್ರತಿನಿಧಿಸುತ್ತಾನೆ ಅಂತ ಯಾರು ಅಂದುಕೊಂಡು ಇರಲಿಲ್ಲ. ಈಗ ಶಿಸ್ತಿನಲ್ಲಿ ಬದುಕುತ್ತಿದ್ದಾನೆ, ರಾಷ್ಟ್ರಕ್ಕಾಗಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾನೆ, ಶಿಸ್ತು ಸಮಯ ಪಾಲನೆ ಕಠಿಣ ಪರಿಶ್ರಮ ಮಾತ್ರ ಆತನನ್ನ ಇಂದು ಎತ್ತರಕ್ಕೆ ಕೊಂಡೊಯ್ದಿದೆ. ಯುವಕರಿಗೆ ಅಲ್ಲಲ್ಲಾ... ನನಗೆ ಅದ್ಭುತವಾದ ಸಂದೇಶವನ್ನ ಅವನು ನೀಡಿದ್ದಾನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ