ಸ್ಟೇಟಸ್ ಕತೆಗಳು (ಭಾಗ ೧೧೮) - ನಿರಾಕಾರ

ಸ್ಟೇಟಸ್ ಕತೆಗಳು (ಭಾಗ ೧೧೮) - ನಿರಾಕಾರ

ಅವರ್ಯಾಕೆ ಬೆಟ್ಟವೇರಿ ನೆಲೆಯಾದರೂ? ದುರ್ಗಮ ಕಾಡಿನ ಮಧ್ಯೆ ಸ್ಥಾಪಿತರಾದರೋ? ಕಲ್ಲುಗಳನ್ನು ತುಳಿದು ಸಾಗಿದ ಮೇಲೆ ಮೂಲೆಯೊಂದರಲ್ಲಿ ಪ್ರತಿಷ್ಠಾಪನೆಯಾದರೂ? ಗೊತ್ತಿಲ್ಲ. ಅವರನ್ನು ತಲುಪಲು ಕಷ್ಟಪಡಲೇಬೇಕು ಅನ್ನೋದಕ್ಕೇನೋ. ಮತ್ತೆ ಸುಲಭದಲ್ಲಿ ದಕ್ಕಿದರೆ ನಮಗೆ ಮೌಲ್ಯವೇ ತಿಳಿಯುವುದಿಲ್ಲ. ಜನ ಸೇರಿ ಕಲ್ಲು ಮುಳ್ಳು ಸ್ವಚ್ಛಗೊಳಿಸಿ ಸನ್ನಿಧಾನ ತಲುಪುವ ಹಾದಿಯನ್ನು  ಕಾಂಕ್ರೀಟಿಕರಣಗೊಳಿಸಿದರು. ಅಭಿವೃದ್ಧಿಯನ್ನು ಮಾರ್ಗಕ್ಕೆ ತಂದರು. ಸಾಗುವವರೆಲ್ಲ ನಿರಾತಂಕವಾಗಿ ಗರ್ಭಗುಡಿ ಮುಟ್ಟಿದರು. ಆದರೆ ನಿರಾಕಾರ ಸಿಗಲೇ ಇಲ್ಲ. ಅಲ್ಲಿಗೆ ಬರೋದು ವ್ಯರ್ಥ ಅನ್ನುವ ಮಾತು ಕೇಳಲಾರಂಭಿಸಿತು. ಹಾದಿಯಲ್ಲಿ ಜನ ಬರುವುದು ನಿಂತುಹೋಯಿತು. ದಾರಿಯಲ್ಲಿ ಕಲ್ಲುಮುಳ್ಳುಗಳೆದ್ದು ನಿಂತವು. ಪಥ ದುರ್ಗಮವಾಯಿತು. ಈಗ ತಲುಪುವವರಿಗೆ ಮತ್ತೆ ನಿರಾಕಾರ ಸಿಗಲಾರಂಭಿಸಿದ. ತಲುಪುವುದು ಸುಲಭದ ಮಾತಲ್ಲ. ಕಠಿಣ ಹಾದಿಯಲ್ಲಿ ಸಾಗಿದಾಗ ಮಾತ್ರ ಜೀವಚೈತನ್ಯದ ದೀಪ ಪ್ರಜ್ವಲಿಸುತ್ತದೆ .

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ