ಸ್ಟೇಟಸ್ ಕತೆಗಳು (ಭಾಗ ೧೧೯೦) - ಪ್ರತಿಭೆ
ವೇದಿಕೆಯ ಕೆಳಗೆ ಕುಳಿತ ಅಮ್ಮ ಮತ್ತು ಅಪ್ಪ ಸಂಭ್ರಮದಿಂದ ಚಪ್ಪಾಳೆ ತಟ್ಟುತ್ತಿದ್ದಾರೆ. ಅವರ ಮಗಳ ನೃತ್ಯವನ್ನು ಕಣ್ತುಂಬಿಸಿಕೊಳ್ಳಲು ತುಂಬಾ ಜನ ಕಾದು ಕುಳಿತಿದ್ದಾರೆ. ಮಗಳು ವೇದಿಕೆಯಲ್ಲಿ ನೃತ್ಯ ಮಾಡುವಾಗ ಶಿಳ್ಳೆ ಚಪ್ಪಾಳೆಗಳದ್ದೇ ಅಬ್ಬರ. ಶಾಲೆಯಲ್ಲಿ ಓದುವ ಈ ಮಗಳ ನೃತ್ಯಕ್ಕೆ ಜನರ ಅಭಿಮಾನವನ್ನು ಕಂಡು ತಂದೆ ತಾಯಿಗಳ ಕಣ್ಣಲ್ಲಿ ಸಂಭ್ರಮದ ಕಣ್ಣೀರು ಇಳಿಯುತ್ತಿದೆ. ತಂದೆ ತಾಯಿಗಳಿಗೆ ಇನ್ನೂ ಅರ್ಥವಾಗಲಿಲ್ಲ ಅಲ್ಲಿ ಶಿಳ್ಳೆ ಚಪ್ಪಾಳೆಗಳು ಬೀಳುತ್ತಿದ್ದದ್ದು ಮಗುವಿನ ನೃತ್ಯಕ್ಕಲ್ಲ ಹಾಡಿಗೆ ದೇಹವನ್ನು ಕುಣಿಸುವಾಗ ನೋಡುಗರೊಳಗಿನ ಕಾಮತನವನ್ನು ತಣಿಸಿದ್ದಕ್ಕೆ. ಆ ತಂದೆ ತಾಯಿಗೆ ಇನ್ನೂ ಅರ್ಥವಾಗಿಲ್ಲ ದೇಹ ಪ್ರದರ್ಶನವೇ ಪ್ರತಿಭೆಯಲ್ಲ ಅನ್ನೋದು. ಆ ಶಾಲೆಯ ಕಸ ಗುಡಿಸುವ ಅಕ್ಕ ಪ್ರತಿಸಲವೂ ಮೌನವಾಗಿ ಕೇಳುತ್ತಿದ್ದಾರೆ. ಈ ಶಾಲೆಯ ವಾರ್ಷಿಕೋತ್ಸವದಲ್ಲಿ ಯಾವುದೋ ಹಾಡಿಗೆ ಅರೆ ಬರೆ ಬಟ್ಟೆ ಹಾಕಿ ಕುಣಿಯುವುದೇ ಪ್ರತಿಭೆಯಾಗಿಬಿಟ್ಟಿದೆಯಾ? ನೋಡುವ ಕಣ್ಣುಗಳು ಗಮನಿಸುತ್ತಿರುವುದೇ ಇದನ್ನ. ಅರ್ಥ ಮಾಡಿಸುವುದು ಯಾರಿಗೆ? ನೋವಿನಿಂದ ವಾರ್ಷಿಕೋತ್ಸವ ಮುಗಿಸಿ ಕಸ ತುಂಬಿದ ಮೈದಾನವನ್ನ ಸ್ವಚ್ಛ ಮಾಡುವ ಕಡೆಗೆ ಹೋಗಿಬಿಟ್ಟರು. ಮನಸ್ಸಿನ ಒಳಗೆ ತುಂಬಿದ ಕಸ ಸ್ವಚ್ಛವಾದರೆ ಎಲ್ಲವೂ ಸ್ವಚ್ಛವಾದೀತು ಅನ್ನೋದು ಅವರಿಗಾದರೂ ಅರ್ಥವಾಗುವುದು ಹೇಗೆ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ