ಸ್ಟೇಟಸ್ ಕತೆಗಳು (ಭಾಗ ೧೧೯೧) - ಒಣ ಮಹೋತ್ಸವ

ಶಾಲೆಯಲ್ಲಿ ವನಮಹೋತ್ಸವಕ್ಕೆ ತುಂಬಾ ಅದ್ಭುತವಾಗಿ ನಡೆಯಲು ತಯಾರಾಗ್ತಾ ಇದೆ. ಹೊರಗಡೆ ಪರಿಸರವನ್ನ ಉಳಿಸುವ ದೊಡ್ಡ ದೊಡ್ಡ ಘೋಷ ವಾಕ್ಯಗಳು, ಎಲ್ಲರಿಗೂ ಉಡುಗೊರೆಯಾಗಿ ನೀಡಲು ತಂದಿರುವ ತರೇವಾರಿ ಗಿಡಗಳು, ಈ ಕಾರ್ಯಕ್ರಮವನ್ನು ಉದ್ಘಾಟಿಸಲೆಂದೇ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ದೊಡ್ಡ ದೊಡ್ಡ ಗಣ್ಯರು, ಹಸಿರುಡಿಗೆ ತೊಟ್ಟ ಎಲ್ಲ ಮಕ್ಕಳು. ಎಲ್ಲರೂ ಕಾರ್ಯಕ್ರಮಕ್ಕೆ ಎದುರು ನೋಡುತ್ತಿದ್ದಾರೆ. ಕಾರ್ಯಕ್ರಮ ಆರಂಭವಾಗುವ ಘೋಷಣೆಯಾಯಿತು. ವೇದಿಕೆಯ ಮೇಲೆ ಅತಿಥಿಗಳು ಪರಿಸರವನ್ನು ಉಳಿಸುವ ಎಲ್ಲ ಮಾತುಗಳಾಡಿದರು. ಭಾಗವಹಿಸಿದ ಅತಿಥಿಗಳಿಗೆ ಮನೆಯ ಮುಂದೆ ಬೆಳೆಸುವ ಗಿಡಗಳನ್ನು ಉಡುಗೊರೆಯಾಗಿ ನೀಡಲಾಯಿತು. ಸಾಂಕೇತಿಕವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಎಲ್ಲರೂ ಮೈದಾನದ ಮೂಲೆಗೆ ಬಂದರು. ಮೊದಲೇ ತೆಗೆದಿಟ್ಟ ಗುಂಡಿಯೊಳಗೆ ಗಿಡವನ್ನು ನೆಟ್ಟು ಮಣ್ಣು ಮುಚ್ಚಿ ಭಾವಚಿತ್ರವನ್ನು ಕ್ಲಿಕ್ಕಿಸಿಕೊಂಡು ಅಲ್ಲಿಂದ ಹೊರಟೆ ಬಿಟ್ರು. ಆ ಗಿಡಕ್ಕೆ ಆಧಾರವಾದ ಕೋಲು ಸಹ ಊರಲು ಇರಲಿಲ್ಲ. ಅದೇ ಗುಂಡಿಯನ್ನು ತೆಗೆದಿದ್ದ ಏಳನೇ ತರಗತಿಯ ನಾಲ್ಕು ಜನ ವಿದ್ಯಾರ್ಥಿಗಳು ಆಗಮಿಸಿ ಸರಿಯಾಗಿ ಮಣ್ಣು ಮುಚ್ಚಿ ಗಿಡದ ಬುಡದಲ್ಲಿ ಬಿದ್ದ ಪ್ಲಾಸ್ಟಿಕ್ ಗಳನ್ನು ತೆಗೆದು ಅದಕ್ಕೊಂದು ಆಧಾರವನ್ನು ಸ್ಥಾಪಿಸಿ ಗಿಡ ಚೆನ್ನಾಗಿ ಬೆಳೆಯುವ ಹಾಗೆ ನೀರುಣಿಸಿ ಅಲ್ಲಿಂದ ಹೊರಟರು. ಆತಿಥಿಗಳ ಕಾರು ಹೊಗೆಯುಗುಳುತ್ತಾ ಶಾಲೆಯ ಮೈದಾನವನ್ನು ದಾಟಿ ಹೊರಗೆ ಹೋಯಿತು. ವೇದಿಕೆಯಲ್ಲಿ ಅವರಿಗೆ ಉಡುಗೊರೆಯಾಗಿ ನೀಡಿದ ಗಿಡ ಅಲ್ಲೇ ಹೊರಗಡೆ ಬಿಸಿಲಿನಲ್ಲಿ ಒಣಗುತ್ತಾ ನಿಂತುಬಿಟ್ಟಿದೆ. ಅಂದಿಗೆ ಸಾರ್ಥಕವಾಯಿತು ಒಣಮಹೋತ್ಸವ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ