ಸ್ಟೇಟಸ್ ಕತೆಗಳು (ಭಾಗ ೧೧೯೨) - ಕ್ಯಾಲೆಂಡರ್
ಸೂರ್ಯ ಮುಳುಗಿ ಮತ್ತೆ ಏಳುತ್ತಾನೆ, ಅಂತಹ ದೊಡ್ಡ ಬದಲಾವಣೆ ಏನು ಘಟಿಸುವುದಿಲ್ಲ ನೀನು ಮನಸ್ಸು ಮಾಡಿದರೆ ನಿನ್ನ ದಿನಚರಿಯಲ್ಲಿ ಏನಾದರೂ ಬದಲಾವಣೆಯಾದರೆ, ನಿನ್ನ ಸಮಯವನ್ನ ಹೊಂದಿಸಿಕೊಂಡ್ರೆ, ಹೊಸದೇನಾದರೂ ಕಲಿತರೆ, ಏನಾದರೂ ಮಾಡಬೇಕು ಎನ್ನುವ ಮನಸ್ಸನ್ನು ಕಾರ್ಯರೂಪಕ್ಕೆ ತಂದರೆ, ನಿನ್ನ ಸಾಧ್ಯತೆಗಳ ಪಟ್ಟಿ ಮಾಡಿಕೊಂಡು ಪ್ರತಿಯೊಂದು ಸಾಧಿಸುವುದರ ಕಡೆಗೆ ಹೆಜ್ಜೆ ಇಟ್ಟರೆ, ಸಮಾಜದ ಕಡೆಗೆ ತುದಿಯುವಂತ ಮನಸ್ಸನ್ನ ಇನ್ನೊಂದಷ್ಟು ಹೆಚ್ಚು ಜಾಗೃತಗೊಳಿಸಿದರೆ, ಖಂಡಿತವಾಗಿಯೂ ನಾನು ಬದಲಾದಾಗ ನಿನ್ನಲ್ಲೂ ಬದಲಾವಣೆಗಳಾಗುತ್ತೆ. ಸುತ್ತಮುತ್ತಲೂ ಬದಲಾವಣೆಗಳನ್ನು ಕಾಣುವ ಅವಕಾಶವೂ ನಿನ್ನದಾಗುತ್ತೆ. ಬರಿಯ ಮಾತು ಯಾವುದನ್ನು ಸಾಧಿಸುವುದಿಲ್ಲ. ಒಂದಷ್ಟು ಮೌನವಾಗಿದ್ದು ಸಾಧಿಸಿ ಕೆಲಸ ಮಾಡಿ ತೋರಿಸುವುದು ಒಳಿತು ಅನ್ನಿಸುತ್ತದೆ. ನಾನು ಹೊಸದಾಗಿ ಬಂದಾಗ ನಿನ್ನನ್ನು ನಾ ನೋಡಿದ ರೀತಿಗೂ ಈಗ ನಿನ್ನಲ್ಲಿ ಆಗಿರುವ ಬದಲಾವಣೆಗೂ ತುಂಬಾ ಅದ್ಭುತವೇನೂ ಆಗಿಲ್ಲ. ನನ್ನೊಳಗೆ ಒಂದಷ್ಟು ನೋವನ್ನು ತುಂಬಿಕೊಂಡಿದ್ದೀಯ, ಬೇಸರವಿದೆ ಹುಮ್ಮಸ್ಸಿದೆ ಅವಕಾಶವಿದೆ ಎಲ್ಲವನ್ನು ದಾಟಿಕೊಂಡು ನಾನು ಮೂಲೆಗೆ ಸೇರುವವನಿದ್ದೇನೆ. ಹೊಸತೊಬ್ಬನನ್ನ ತಂದು ಇದೇ ಮೊಳೆಯಲ್ಲಿ ನೇತುಹಾಕ್ತಿಯ. ನಾನು ನೇತು ಬಿದ್ದ ಹಾಗೆ ನೀನು ನೇತು ಬೀಳಬೇಡ. ಬದಲಾಗುತ್ತಿರು ನಿನ್ನಲ್ಲೂ ಹೊಸತನವಿರಲಿ...
ಇಷ್ಟು ಹೇಳಿದ ಕ್ಯಾಲೆಂಡರ್ ನನ್ನ ಮುಖವನ್ನು ನೋಡಿ ನಕ್ಕು ಮೂಲೆಗೆ ಸರಿಯಿತು.. ಹೊಸ ಕ್ಯಾಲೆಂಡರ್ ಮೊಳೆಯಲ್ಲಿ ನೇತು ಬಿದ್ದಿದ್ದು... ಬದಲಾಗಬೇಕಾಗಿರೋದು ನಾನು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ