ಸ್ಟೇಟಸ್ ಕತೆಗಳು (ಭಾಗ ೧೧೯೬) - ನಂಬಬೇಕೇ?

ಸ್ಟೇಟಸ್ ಕತೆಗಳು (ಭಾಗ ೧೧೯೬) - ನಂಬಬೇಕೇ?

ಅವನು ತುಂಬಾ ದೊಡ್ಡ ಮಾತುಗಳನ್ನಾಡುತ್ತಿದ್ದ. ಈ ಜಗತ್ತಲ್ಲಿ ಮನುಷ್ಯರನ್ನ ನಂಬುವುದಕ್ಕೆ ಸಾಧ್ಯವಿಲ್ಲ. ಅವರೆಲ್ಲರೂ ಸ್ವಾರ್ಥಿಗಳಾಗಿ ಯೋಚಿಸುತ್ತಾರೆ. ತನ್ನ ಜೊತೆಗೆ ಇನ್ನೊಬ್ಬರನ್ನು ಬೆಳೆಸುವುದಕ್ಕೆ ಯೋಚನೆ ಮಾಡ್ತಾ ಇಲ್ಲ. ಮನುಷ್ಯರಿಗಿಂತ ನಾಯಿಯನ್ನು ನಂಬಬಹುದು. ಒಂದು ದಿನ ಬಿಸ್ಕೆಟ್ ಹಾಕಿದ್ರೆ ನಾಳೆಯೂ ನಮ್ಮನ್ನ ನೋಡಿ ನಗುತ್ತಾ ಹತ್ತಿರ ಬಂದು ಮಾತನಾಡುತ್ತವೆ. ಈ ಮನುಷ್ಯ ಮರೆತು ಮುಂದೆ ಸಾಗುತ್ತಾನೆ. ನಮ್ಮ ಉಪಯೋಗಕ್ಕೆ ಮನುಷ್ಯ ಸಿಗೋದೇ ಇಲ್ಲ. ಹಾಗಾಗಿ ಮನುಷ್ಯನ ನಂಬಬಾರದು. ಹೀಗೆ ಎಲ್ಲರ ಜೊತೆಗೆ ಮಾತನಾಡ್ತಾ ಇದ್ದವ ರಸ್ತೆಯಲ್ಲಿ ಅಪಘಾತವಾಗಿ ಹಾಸ್ಪಿಟಲ್ ಸೇರಿದಾಗ ಆತನ ಗೆಳೆಯರು ಊರವರು ಪರಿಚಯ ಇದ್ದವರು ಇಲ್ಲದವರು ಎಲ್ಲರೂ ಧನ ಸಹಾಯ ಮಾಡಿ ಆತನನ್ನು ಉಳಿಸಿದರು. ಆತನ ಬದುಕಿಗಾಗಿ ಉಸಿರಿಗಾಗಿ ಕೈ ಮುಗಿದು ಪ್ರಾರ್ಥಿಸಿದರು. ಅವನ ಮನೆಯನ್ನು ಗಟ್ಟಿ ಮಾಡಿದರು. ದೇಹದಲ್ಲಿ ಮತ್ತೆ ಆರೋಗ್ಯವನ್ನು ತುಂಬಿಸಿಕೊಂಡವ ಮತ್ತೆ ವೇದಿಕೆಗಳಲ್ಲಿ ಮಾತನಾಡುವುದಕ್ಕೆ ಪ್ರಾರಂಭ ಮಾಡಿದ್ದಾನೆ. ಈ ಮನುಷ್ಯರನ್ನ ನಂಬಬೇಡಿ ಅಂತ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ