ಸ್ಟೇಟಸ್ ಕತೆಗಳು (ಭಾಗ ೧೧೯೯) - ಪತ್ರ

ಆ ಪತ್ರವೊಂದಕ್ಕೆ ವಿಳಾಸ ಸಿಕ್ಕಿಲ್ಲ . ಹಲವು ಸಮಯದಿಂದ ತನ್ನೊಳಗೆ ಅದ್ಭುತವಾದ ಸಂದೇಶವನ್ನು ಇಟ್ಟುಕೊಂಡು ವಿಳಾಸಕ್ಕಾಗಿ ಕಾಯುತ್ತಲೇ ಕುಳಿತು ಬಿಟ್ಟಿದೆ. ಅದರೊಳಗೆ ಜೀವನದ ಅದ್ಭುತ ಗುರಿಯ ಕಡೆಗೆ ಸಾಗುವ ದಾರಿ ಇದೆ, ಎಲ್ಲ ನೋವನ್ನು ಮರೆತು ಸಂತೋಷದಿಂದ ಬದುಕುವುದನ್ನು ಹೇಳಿಕೊಡುವ ಮಂತ್ರವಿದೆ, ಮಾಡುವ ಎಲ್ಲ ಕೆಲಸವು ಒಳಿತಿನ ಕಡೆಗೆ ಸಾಗುವ ಚಿಂತನೆ ಇದೆ ಬದುಕನ್ನ ಹೇಗೆ ಸಾಧಿಸಬೇಕು ಅನ್ನುವ ಮಾರ್ಗದರ್ಶಿ ಸೂತ್ರವಿದೆ. ಆದರೆ ಆ ವಿಳಾಸವನ್ನ ಯಾರು ಸುಖಾಸುಮ್ಮನೆ ಬರೆಯುವ ಹಾಗಿಲ್ಲ. ಒಂದಷ್ಟು ಷರತ್ತುಗಳಿವೆ ಪೂರ್ತಿಯಾದಾಗ ವಿಳಾಸ ದಾಖಲಾಗುತ್ತದೆ. ಯಾರಿಗೂ ಮೋಸ ಮಾಡುವ ಚಿಂತನೆಯು ಇರಬಾರದು, ಸದಾ ಒಳಿತನ್ನೆ ಬಯಸುವ ಪ್ರೀತಿಯನ್ನು ಹಂಚುವ ಗೆಲುವಿನ ಕಡೆಗೆ ಪ್ರತಿದಿನವೂ ತುಡಿಯುವ ಮನಸ್ಸಿದ್ದರೆ ಆ ಪತ್ರ ನಿಮ್ಮ ಮನೆಗೆ ತಲುಪುತ್ತದೆ. ಆಗೋದೆಲ್ಲವೂ ಒಳ್ಳೆಯದಕ್ಕೆ ನಾನು ಮಾಡಿದ್ದೆಲ್ಲವೂ ನನ್ನ ಬಳಿಗೆ ತಿರುಗಿ ಖಂಡಿತವಾಗಿಯೂ ಬರುತ್ತದೆ ಇನ್ನುವ ನಂಬಿಕೆ ಇರುವವರಿಗೆ ಆ ಕ್ಷಣವನ್ನ ಅದ್ಭುತವಾಗಿ ಅನುಭವಿಸಿ ಹಿಂದೆ ಮಾಡಿದ ತಪ್ಪುಗಳನ್ನು ನೆನಪಿಟ್ಟುಕೊಂಡು ಮುಂದೆ ಆಗಬಹುದಾದ ಕನಸುಗಳ ಪಟ್ಟಿಗಳನ್ನು ಜಾಗೃತೆಯಿಂದ ಕಾಯುತ್ತಾ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೊಸ ಸಾಧ್ಯತೆಗಳನ್ನು ಹುಡುಕುತ್ತಾ ಒಂದು ದಿನವೂ ಸಮಯವನ್ನು ವ್ಯರ್ಥ ಮಾಡದೆ ಚೈತನ್ಯದಿಂದ ದುಡಿಯುವ ಮನಸ್ಸಿದ್ದವರ ಮನೆಗೆ ಆ ಪತ್ರ ಖಂಡಿತವಾಗಿಯೂ ಬರುತ್ತದೆ. ನನಗಂತೂ ಖಾತ್ರಿ ಆಗಿದೆ ನನ್ನ ಮನೆಗೆ ಆ ಪತ್ರ ತಲುಪುವುದಕ್ಕೆ ಸಾಧ್ಯವಿಲ್ಲ. ನಿಮ್ಮಲ್ಲಿ ಮೇಲಿನ ಗುಣಗಳಿದ್ದು ಬಿಟ್ಟರೆ ನಿಮ್ಮ ಮನೆಗೆ ಖಂಡಿತವಾಗಿಯೂ ಆ ಪತ್ರ ತಲುಪುತ್ತದೆ ಕಾಯುತ್ತಿರಿ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ