ಸ್ಟೇಟಸ್ ಕತೆಗಳು (ಭಾಗ ೧೧) - ಜೀವ ಭಯ
ಅಂದು ಓಡಿದ್ದೇವೆ ಜೀವ ಉಳಿಸಿಕೊಳ್ಳಲು. ಆದರೂ ಉಳಿದದ್ದು ಕೆಲವರದ್ದು ಮಾತ್ರ. ಕೆಲವು ವರ್ಷಗಳೇ ಸಂದಿವೆ. ಊರು ನೋಡಬೇಕೆನಿಸಿತು ತಿರುಗಿ ಬಂದಿದ್ದೇನೆ. ಯಾವುದು ಮೊದಲಿನ ಹಾಗಿಲ್ಲ. ಊರು ಅನಾಥವಾಗಿದೆ. ಮುಳ್ಳು ಪೊದೆಗಳೇ ಆಶ್ರಯ ಬೇಡಿ ಪಡೆದಿದೆ. ನಮ್ಮ ಊರಲ್ಲಿ ಒಬ್ಬ ರಾಜನಿದ್ದ. ನೀವು ಅವನ ಹೆಸರು ಕೇಳಿರಬಹುದು. ಹಲವು ಗ್ರಂಥ, ಶಾಸನ, ತಾಳೆಗರಿಯಲ್ಲಿ. ಇತಿಹಾಸ ಕೆದಕಿದರೆ ಅವನು ಕಂಡೆ ಕಾಣುತ್ತಾನೆ. ಅವನನ್ನು ಹೊಗಳಿ ಬರೆದ ಸಾಲುಗಳು ಪುಸ್ತಕದ ಪುಟ ಮುಗಿದರೂ ಮುಗಿಯೋದಿಲ್ಲ. ಅಲ್ಲೆಲ್ಲೂ ನನ್ನ ಅಮ್ಮ, ಅಪ್ಪ, ಮಾವ, ನೆರೆಹೊರೆಯವರ ಬಗ್ಗೆ ಸುದ್ದಿಯೇ ಇಲ್ಲ. ಈ ಊರಿನಲ್ಲಿ ವ್ಯಾಪಾರ ಮಾಡಿದವರು ನಾವು. ಅರಮನೆಯ ಗಾರೆ ಕೆಲಸ, ನೀರಿನ ಕೊಳಾಯಿ, ಬೆಳಕಿನ ವ್ಯವಸ್ಥೆ ಮಾಡಿದ್ದೇವೆ. ರಾಜನಲ್ಲಿ ದುಡ್ಡಿತ್ತು ಅದಕ್ಕೆ ಇನ್ನೂ ಪುಸ್ತಕದ ಒಳಗೆ ಉಳಿದಿದ್ದಾನೆ. ಆ ರಾಜನಿಗೆ ರಾಜ್ಯ ವಿಸ್ತರಣೆಯ ಮದ. ಯುದ್ಧ ಸಾರಿದ್ದ, ಎಲ್ಲರನ್ನೂ ಪ್ರೇರೇಪಿಸಿ ಘೋಷಣೆ ಕೂಗಿದ್ದ. ಜಗಳವಾಡೋಕೆ ಹೋದವರು ಸಾಮಾನ್ಯರು. ಆದರೆ ಎಲ್ಲೂ ಜಗಳದ ನಡುವೆ ರಾಜ ಕಂಡಿಲ್ಲ. ಅತ್ತಕಡೆಯಿಂದ ಬಂದವರು ನಮ್ಮಂಥವರೇ, ಅಲ್ಲಿಯೂ ರಾಜನ ಕುರುಹಿಲ್ಲ.
ಅವರ ಆಸೆಗೆ ನಮ್ಮವರ ನೆತ್ತರು ಹರಿಯಿತು. ಬೆವರು ಸುರಿಸಿ ಕಟ್ಟಿದ್ದ ಮನೆ ಬಿಡಬೇಕಾಯಿತು. ಜೀವ ಕೈಯಲ್ಲಿ ಹಿಡಿದು ಓಡಿದೆವು. ಈಗ ತಿರುಗಿ ಬಂದಿದ್ದೇನೆ. ಊರ ಮಧ್ಯ ಆ ರಾಜನ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಬಿಸಿಲು ಹೆಚ್ಚಾಯಿತು ಅದರ ನೆರಳಿಗೆ ಹೋದೆ. ಹೆದರಿಕೆಯಾಗಿ ಅಲ್ಲಿಂದ ಓಡಿದೆ… ಯಾರಾದರೂ ನೋಡಿದರೆ ಬರೆದುಬಿಟ್ಟಾರು..
"ರಾಜ ಮರಣಿಸಿದ ಮೇಲೂ ಅವನ ಮೂರ್ತಿ ನೆರಳು ನೀಡಿದೆ ಎಂಥಾ ಉದಾರಮಯೀ"....
-ಧೀರಜ್ ಬೆಳ್ಳಾರೆ
ಇಂಟರ್ನೆಟ್ ಚಿತ್ರ ಕೃಪೆ