ಸ್ಟೇಟಸ್ ಕತೆಗಳು (ಭಾಗ ೧೨೦೫) - ಅನುರಾಗ
ಅವಳು ಉಸಿರು ನಿಲ್ಲಿಸಿದ್ದಾಳೆ. ಹೇಡಿಯಂತೆ ಬದುಕಿನ ಆಸೆಗಳನ್ನೆಲ್ಲಾ ಮೂಟೆ ಕಟ್ಟಿ ಅವನ ಜೊತೆಗೆ ಬದುಕಬೇಕೆನ್ನುವ ಒಂದೇ ಆಸೆಯನ್ನ ತುಂಬಾ ಹಚ್ಚಿಕೊಂಡು ಆಸೆ ಈಡೆರದೇ ಹೋದಾಗ ಉಸಿರು ನಿಲ್ಲಿಸಿದ್ದಾಳೆ. ಮನೆಯ ಆಸೆಯ ಗೋಪುರ ಕುಸಿದು ಹೋಗಿದೆ. ಕನಸುಗಳು ಕಮರಿ ಹೋಗಿದೆ. ಇಬ್ಬರೂ ಒಪ್ಪಿಗೆಯಲ್ಲಿ ಪ್ರೀತಿಯ ಬಾಂಧವ್ಯ ಆರಂಬಿಸಿದವರು. ಎಲ್ಲವೂ ಸುಂದರವಾಗಿತ್ತು. ಇಬ್ಬರ ಮಾತುಕತೆ, ದೂರ ಪಯಣ, ತುಂಟಾಟ ಎಲ್ಲವೂ ಬದುಕನ್ನು ಇನ್ನಷ್ಟು ಹತ್ತಿರವಾಗಿಸಿತ್ತು. ದಿನಗಳು ಉರುಳಿದಂತೆ ಆತನ ಹೆಜ್ಜೆಗಳು ನಿಧಾನವಾದವು. ಆಕೆ ಅದನ್ನು ನಿರೀಕ್ಷಿಸಿ ಇರಲಿಲ್ಲ. ಅವನ ಬಿಟ್ಟು ಬದುಕುವ ಯೋಚನೆಯೂ ಇರಲಿಲ್ಲ. ಮನೆಯ ನಂಬಿಕೆಯನ್ನ ಗಾಳಿಗೆ ತೂರಿ, ಹೆತ್ತಾಡಿಸಿದ ಹೆತ್ತವರ ಮರೆತು ಉಸಿರು ನಿಲ್ಲಿಸಿದ್ದಾಳೆ. ಕೊನೆಯ ಉಸಿರಿನ ಕಡೇ ಕ್ಷಣದಲ್ಲಿ ಕಣ್ಣ ಮುಂದೆ ಮನೆಯವರು ಮಾತ್ರ ಕಂಡು ಬಂದರು. ಬದುಕಬೇಕೆನ್ನುವ ಆಸೆ ಹೆಚ್ಚಾಯಿತು. ಆದರೆ ವಿಧಿ ಕೇಳಲಿಲ್ಲ. ಉಸಿರನ್ನ ತನ್ನೊಳಗೆ ಗಟ್ಟಿಯಾಗಿ ಬಂಧಿಯಾಗಿಸಿತು. ಬದುಕಿನ ತೂಕದಲ್ಲಿ ಕೆಲವು ತಿಂಗಳುಗಳ ಪ್ರೀತಿಯ ಮುಂದೆ ಮನೆಯ ಮಮತೆಯ ತೂಕಹೆಚ್ಚಾಗಲೇ ಇಲ್ಲ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ