ಸ್ಟೇಟಸ್ ಕತೆಗಳು (ಭಾಗ ೧೨೦೬) - ವಾಸನೆ
ವಾಸನೆಗೆ ದೇಹ ಒಗ್ಗಿ ಹೋಗಿದೆ. ಈಗೀಗ ವಾಸನೆಯನ್ನ ದೇಹ ಸಹಿಸಿಕೊಂಡು ಬಿಟ್ಟಿದೆ. ಬದುಕುವ ಅನಿವಾರ್ಯತೆ ಸೃಷ್ಟಿಯಾಗಿದೆ. ಏನಾದರೂ ಕೆಲಸ ಮಾಡಲೇಬೇಕಿತ್ತು, ಮನೆಯ ಪರಿಸ್ಥಿತಿ ಮನೆಯಲ್ಲಿ ಕುಳಿತು ತಿನ್ನುವಂತಹ ವ್ಯವಸ್ಥೆ ಇಲ್ಲ. ಗಂಡ ಹೆಂಡತಿ ಇಬ್ಬರೂ ದುಡಿದರೆ ಮಾತ್ರ ಮಕ್ಕಳ ಕನಸಿಗೆ ನೀರೆರೆಯಬಹುದು. ಹಾಗಾಗಿ ಮೀನು ಮಾರುಕಟ್ಟೆಯಲ್ಲಿ ಮೀನನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಕೈ ಹಾಕಿಬಿಟ್ರು. ಮೊದಲು ಒಂದಷ್ಟು ದಿನ ಆ ಕೆಲಸ ಮಾಡಿ ಮನೆಗೆ ಬಂದು ಅನ್ನ ಹೊಟ್ಟೆಗೆ ಇಳಿಯುತ್ತಿರಲಿಲ್ಲ ಆದರೆ ಯಾವಾಗ ಸಂಪಾದನೆ ಆರಂಭವಾಯಿತೋ ಜೀವನದ ಸ್ಥಿತಿ ಬದಲಾಯಿತು. ಆಗ ಮನಸ್ಸು ಅದಕ್ಕೆ ಒಗ್ಗಿಕೊಂಡು ಹೋಯಿತು. ಸಂಜೆ ಮನೆ ತಲುಪುವಾಗ ಕೈಕಾಲು ನೋವು, ಗಂಟು ನೋವು, ಬೆನ್ನು ನೋವು, ಕೈಯಿಡೀ ನೀರಲ್ಲಿದ್ದು ಇದ್ದು ಮೃದುವಾಗಿ ಬಿಟ್ಟಿದೆ, ಮತ್ತೆ ಮನೆ ಕೆಲಸವನ್ನು ಮಾಡಲೇಬೇಕು. ಪರಿಸ್ಥಿತಿಯನ್ನ ಒಪ್ಪಿಕೊಂಡಾಗಿದೆ. ಒಂದು ದಿನದ ದುಡಿಮೆ ಇಲ್ಲವಾದರೆ ಮನೆಯೊಳಗೆ ಅನ್ನದ ಡಬ್ಬಿ ಖಾಲಿಯಾಗುತ್ತದೆ. ದೇವರು ಕೈ ಬಿಡುವುದಿಲ್ಲ ಅನ್ನುವ ನಂಬಿಕೆಯಿಂದಲೇ ಬದುಕು ಸಾಗಿದೆ. ಆ ವಾಸನೆ ಒಳಗೆ ಬದುಕು ಸಾಗಿಬಿಟ್ಟಿದೆ. ಓಡಾಡುವವರಿಗೆ ಅದು ವಾಸನೆಯ ತಾಣ ಒಳಗೆ ಬದುಕುತ್ತಿರುವವರಿಗೆ ಬದುಕಿನ ನಿಲ್ದಾಣ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ