ಸ್ಟೇಟಸ್ ಕತೆಗಳು (ಭಾಗ ೧೨೧೨) - ಎಚ್ಚರ

ಸ್ಟೇಟಸ್ ಕತೆಗಳು (ಭಾಗ ೧೨೧೨) - ಎಚ್ಚರ

ಬೆಳಗಿನ ಸೂರ್ಯ ಮನೆಯ ಮುಂದೆ ಬಂದು ಅಲಾರಾಂ ಹೊಡೆದು ಮುಂದೆ ಚಲಿಸಿಯಾಗಿದೆ. ನಾನು ಎದ್ದು ನನ್ನ ಕೆಲಸದ ಕಡೆಗೆ ಹೋಗೋಣ ಅನ್ನುವಷ್ಟರಲ್ಲಿ ಮನೆಯ ಮುಂದೆ ಅವರು ನಿಂತಿದ್ರು. ಇವತ್ತು ನಾನು ಮಾತನ್ನ ಆರಂಭಿಸುವ ಮೊದಲೇ ಅವರ ಮಾತು ಶುರುವಾಗಿತ್ತು.

"ನೋಡು ಇನ್ನಾದರೂ ಎಚ್ಚರಗೊಳ್ಳು ಇಲ್ಲದಿದ್ದರೆ ಕಷ್ಟ ಇದೆ "

"ಆದರೆ ನಾನು ಎಚ್ಚರವಾಗಿದ್ದೇನೆ, ಎದ್ದು ಈಗಾಗಲೇ 30 ನಿಮಿಷ ದಾಟಿದೆ, ಆದ್ರೂ ನೀವು ಇದೇ ಮಾತನ್ನು ಹೇಳ್ತಾ ಇರೋದು ಸರಿಯಲ್ಲ ಅಲ್ವಾ?

"ನೋಡು ನೀನು ಎಚ್ಚರಗೊಂಡಿರುವುದು ಈ ದಿನದ ಬೆಳಗಿನಿಂದ ಆದರೆ ಅದು ನಿನ್ನ ಹೊರಗಿನ ಕಣ್ಣನ್ನ ತೆರೆದದ್ದಷ್ಟೇ. ನಿನ್ನೊಳಗಿನ ಕಣ್ಣೊಂದಿದೆ ಅದನ್ನ ತೆರೆದು ಎಚ್ಚರಗೊಳ್ಳಬೇಕಾಗಿದೆ. ನೀನು ಹೋಗುವ ದಾರಿ ಮಾಡುವ ಕೆಲಸ, ಆಡುವ ಮಾತು ಕೇಳುವ ಶಬ್ದ ಎಲ್ಲವೂ ನಿನ್ನ ಬದುಕಿಗೆ ಒಳಿತಾಗುತ್ತೋ ಕೆಡುಕಾಗುತ್ತೋ ಅದನ್ನ ಅರ್ಥ ಮಾಡಿಕೊಳ್ಳಬೇಕು. ಸಮಯ ಮೀರುವ ಮೊದಲು ಎಚ್ಚರಗೊಳ್ಳಬೇಕು. ಇಲ್ಲವಾದರೆ ಅರಿವಿಲ್ಲದೆ ಹೂತು ಹೋಗುವ ಪರಿಸ್ಥಿತಿ ನಿನ್ನದಾಗಬಹುದು. ಹಾಗಾಗಿ ಎಚ್ಚರಗೊಳ್ಳು ಮತ್ತೊಮ್ಮೆ ಹೇಳುತ್ತಿದ್ದೇನೆ ಎಚ್ಚರಗೊಳ್ಳು" ಹಾಗಂದವರು ಮನೆಯೊಳಗೆ ಪ್ರವೇಶಿಸದೆ ಹೋಗಿಯೇ ಬಿಟ್ರು. ನಾನು ಎಚ್ಚರಗೊಳ್ಳಬೇಕಾದ ಬಗೆ ಹೇಗೆ ಎನ್ನುವುದನ್ನ ಯೋಚಿಸುತ್ತಾ ಸಮಯ ದಾಟಿಸುತ್ತಿದೆ. 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ