ಸ್ಟೇಟಸ್ ಕತೆಗಳು (ಭಾಗ ೧೨೧೩) - ಇನ್ನೂ ಬರಲಿ

ಸ್ಟೇಟಸ್ ಕತೆಗಳು (ಭಾಗ ೧೨೧೩) - ಇನ್ನೂ ಬರಲಿ

ಅಪ್ಪ ಹೇಳಿದ ಕಥೆ ಕೇಳಿ ನನಗೆ ಕಾಲ ಎಷ್ಟು ಬದಲಾಗಿದೆ ಅಂತ ಅನ್ನಿಸ್ತು. ಒಂದು ಊರಿನಲ್ಲಿ ಒಬ್ಬರು ಹೋಟೆಲ್ ಆರಂಭಿಸಿದರು. ಆರಂಭಿಸಿ ಕೆಲವು ದಿನ ನಡೆಸಿದವರಿಗೆ ಅದರಿಂದ ಲಾಭ ಉತ್ಪತ್ತಿ ಮಾಡುವುದಕ್ಕಾಗ್ಲಿಲ್ಲ. ಹಾಗಾಗಿ ಅದನ್ನ  ಯಾರಿಗಾದರೂ ಬಾಡಿಗೆ ನೀಡುವ ನಿರ್ಧಾರಕ್ಕೆ ಬಂದರು. ತಮಗೆ ಸಿಗುತ್ತಾ ಇದ್ದ ದುಡ್ಡಿನ ಮೇಲೆ ತಿಂಗಳ ಬಾಡಿಗೆ ನಿಗದಿ ಮಾಡಿ 15,000 ಅಂತ ಹೇಳಿದ್ರು. ಆ ಅಂಗಡಿಯಲ್ಲಿ ಬಾಡಿಗೆಗೆ ಹೋಟೆಲ್ ನಡೆಸುತ್ತಿದ್ದವನಿಗೆ  ಹೋಟೆಲ್ ಕೆಲಸದ ಮೇಲೆ ತುಂಬಾ ಪ್ರೀತಿ. ಮನಸ್ಸಿಟ್ಟು ಕೆಲಸ ನಿರ್ವಹಿಸಿ ಹೊಸ ಹೊಸ ವಿಧಾನಗಳ ಅಳವಡಿಸಿಕೊಂಡು ಹೆಚ್ಚು ಜನ ಬರುವಂತೆ ಮಾಡಿ ಹೆಚ್ಚು ಲಾಭ ಗಳಿಸಲು ಆರಂಭಿಸಿದ. ಆರಂಭವಾಗಿ ತಿಂಗಳುಗಳಾಗುವಷ್ಟರಲ್ಲಿ ಆ ಹೋಟೆಲಿನ ಮೊದಲಿದ್ದ ಯಜಮಾನ ನೀನು 15,000 ಕ್ಕಿಂತ 21000 ನೀಡಬೇಕು ಅಂತ ತಗಾದೆ ತೆಗೆದ. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಧರ್ಮ ಸಿಗುತ್ತಿರುವ ಲಾಭವನ್ನು ನಿರ್ಧರಿಸಿ ಬಾಡಿಗೆ ಹೆಚ್ಚಿಸುವುದು ತಪ್ಪು ಎಂದು ಎಷ್ಟೇ ಸಾರಿ ಹೇಳಿದರು ಆತ ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ. ಹಳೆಯ  ಹೋಟೆಲ್ ಯಜಮಾನನಿಗೆ ದುಡ್ಡು ಮಾಡಬೇಕಿತ್ತು, ತನಗಾಗದ ಲಾಭ ಇನ್ಯಾರಿಗೂ ಆಗ್ತಾ ಇದೆ ಅನ್ನುವಾಗ ಮನಸ್ಸು ತಡಿಯದೆ ಹಾಲಿನ ಜೊತೆ ರಕ್ತವನ್ನು ಹೀರಲಾರಂಬಿಸಿದ. ಇದು ಕೆಟ್ಟತನ ಅಲ್ಲದೆ ಮತ್ತೇನು?

 ಕಾಲ ಬದಲಾಗಿದೆ ಎಚ್ಚರ ಇರು ಅಂತಂದು ಅಪ್ಪ ಮೌನವಾದರೂ. ಹಾಗಾದರೆ ನಾವು ಒಳಿತಾಗೋದು ನಮ್ಮವರಿಗೆ ಇಷ್ಟ ಆಗುವುದಿಲ್ಲ ಅಂತಹ ಕಾಲದಲ್ಲಿದ್ದೇವಲ್ಲ ಮುಂದೆ ಬದುಕು ಹೇಗೆ ಅನ್ನುವ ಯೋಚನೆ ನನ್ನನ್ನು ಕಾಡಲಾರಂಭಿಸಿತು ? ನೀವೇನಂತೀರಿ ಈ ಮನಸ್ಥಿತಿಗೆ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ